371(ಜೆ) ಅಡಿ ನೇಮಕಾತಿ: ಗೊಂದಲಗಳ ಶಾಶ್ವತ ನಿವಾರಣೆಗೆ ಆಗ್ರಹ
ಕಲಬುರಗಿ,ಸೆ.23: ಕಲ್ಯಾಣ ಕರ್ನಾಟಕ ಪ್ರದೇಶದ 371(ಜೆ) ನೇಮಕಾತಿಗಳಿಗೆ ಪ್ರಸ್ತುತ ಇರುವ ಗೊಂದಲಗಳ ಸುತ್ತೋಲೆಗಳನ್ನು ವಾಪಸ್ ಪಡೆದು ಮೆರಿಟ್ ಹಾಗೂ ರೋಸ್ಟರ್ ನೀತಿಯಡಿ ಆಯ್ಕೆಪಟ್ಟಿ ಸಿದ್ದಪಡಿಸಲು ಅನುಕೂಲವಾಗುವಂತೆ ನ್ಯೂನ್ಯತೆಗಳನ್ನು ಸರಿಪಡಿಸಿ ಹೊಸದಾಗಿ ಸುತ್ತೋಲೆ ಹೊರಡಿಸಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಗೌರವ ಅಧ್ಯಕ್ಷ ಬಸವರಾಜ ದೇಶಮುಖ ಹಾಗೂ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ 545 ಪೆÇೀಲಿಸ್ ಸಬ್ ಇನ್ಸಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ರೀತಿಯಲ್ಲಿ ರಾಜ್ಯದ ಡೈರೆಕ್ಟರ್ ಜನರಲ್ ಆಫ್ ಇನ್ಸಪೆಕ್ಟರ್ 371(ಜೆ) ಮೀಸಲಾತಿ ಕೋರಿರುವ ಅಭ್ಯರ್ಥಿಗಳನ್ನು ದಿನಾಂಕ 06-06-2020ರ ಸುತ್ತೋಲೆಯಂತೆ ಆಯ್ಕೆಪಟ್ಟಿ ಪ್ರಕಟಿಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಇದೊಂದು ಅತ್ಯಂತ ವಿಷಾದನೀಯ ವಿದ್ಯಮಾನ ಎಂದ ಅವರು, ಪ್ರಸ್ತುತ ಸರಕಾರವು ದಿನಾಂಕ 01-02-2023ರ ಸುತ್ತೋಲೆಯಂತೆ ನೇಮಕಾತಿ ಪ್ರಾಧಿಕಾರಗಳು ಸೂಚನೆಗಳನ್ನು ಪಾಲಿಸಬೇಕಿದ್ದು, ಅದಾಗ್ಯೂ ಮುಖ್ಯಮಂತ್ರಿಗಳ ದಾರಿತಪ್ಪಿಸಿ ಕಲ್ಯಾಣ ಕರ್ನಾಟಕದ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವ ಹುನ್ನಾರ ನಡೆಸಿರುವುದು ಅತ್ಯಂತ ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರಾಗಿದ್ದ ಗೋವಿಂದ ಕಾರಜೋಳ ಅವರು 06-06-2020ರ ಸುತ್ತೋಲೆ ಹೊರಡಿಸಿದ್ದು, ಅದರಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ಮಿಕ್ಕುಳಿದ ವೃಂದಕ್ಕೆ ಅರ್ಜಿ ಸಲ್ಲಿಸುತ್ತೀರಾ? ಅಥವಾ ಸ್ಥಳೀಯ ವೃಂದಕ್ಕೆ ಮಾತ್ರ ಅರ್ಜಿ ಸಲ್ಲಿಸುತ್ತೀರಾ? ಎಂದು ಹಲವು ಬಾರಿ ಪ್ರಶ್ನಿಸಲಾಗಿದೆ. ಒಂದು ವೇಳೆ ಮಿಕ್ಕುಳಿದ ವೃಂದ ಆಯ್ಕೆ ಮಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಸೇವೆಯಲ್ಲಿ 371(ಜೆ) ಮೀಸಲಾತಿಯ ಯಾವುದೇ ಸೌಲಭ್ಯ ಲಭಿಸುವುದಿಲ್ಲ ಎಂದು ಸೂಚಿಸಲಾಗಿದೆ. ಇದರ ಬೆನ್ನಲ್ಲೇ ನಂತರ ಅಧಿಕಾರಕ್ಕೆ ಬಂದ ಸಚಿವ ಶ್ರೀರಾಮುಲು ದಿನಾಂಕ 01-02-2023 ರಂದು ಹೊಸದಾಗಿ ಸುತ್ತೋಲೆ ಹೊರಡಿಸಿದ್ದು, ಅದರಂತೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಮೊದಲಿಗೆ ಮೆರಿಟ್ ಆಧಾರದಲ್ಲಿ ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಪರಿಗಣಿಸಬೇಕು. ಇನ್ನುಳಿದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದಲ್ಲಿ ಆಯ್ಕೆ ಮಾಡಬೇಕೆಂದು ಸೂಚಿಸಲಾಗಿದೆ ಎಂದು ಪ್ರಸ್ತುತ ಬೆಳವಣಿಗೆಯ ಹಿಂದಿನ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿದರು.
ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 371 (ಜೆ) ಕಲಂ ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿರುವ ಪ್ರಿಯಾಂಕ್ ಖರ್ಗೆಯವರು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಲು ಜನರಿ 2024ರಂದು ಸಭೆ ಕೈಗೊಂಡು 01.02.2023ರ ಸುತ್ತೋಲೆ ಜಾರಿಗೆ ತಂದರು. ಪ್ರಸ್ತುತ ಇದೇ ಸುತ್ತೋಲೆ ಚಾಲ್ತಿಯಲ್ಲಿದ್ದರೂ ಗೃಹ ಇಲಾಖೆಯವರು ಕಲ್ಯಾಣ ಕರ್ನಾಟಕ ಭಾಗಕ್ಕೆ ವಂಚಿಸಲು ಷಡ್ಯಂತ್ರ ಮಾಡಿರುವ ಬಗ್ಗೆ ಸಚಿವರುಗಳಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣ ಪ್ರಕಾಶ ಪಾಟೀಲ್ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆಗಿರುವ ಪ್ರಮಾದ ಸರಿಪಡಿಸಿರುವುದು ಸ್ವಾಗತಾರ್ಹ ಎಂದರು.
ಆದಾಗ್ಯೂ ಈ ರೀತಿಯ ಅನ್ಯಾಯವನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಜನತೆ ಯಾವುದೇ ಕಾರಣಕ್ಕೂ ಒಪ್ಪುವದಿಲ್ಲ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಲ್ಯಾಣದ ಜನಮಾನಸದ ವತಿಯಿಂದ ನಮ್ಮ ಹಕ್ಕಿನ ವಿಷಯಗಳಿಗೆ ಸಂಬಂಧಿಸಿ ಜಾಗೃತಿ ವಹಿಸುತ್ತದೆ. ಒಂದು ವೇಳೆ ಸರಕಾರ ನಮ್ಮ ಹಕ್ಕಿನ ನೇಮಕಾತಿ, ಮುಂಬಡ್ತಿ ಮತ್ತು ಶೈಕ್ಷಣಿಕ ಪ್ರವೇಶಗಳಲ್ಲಿ ಪದೇಪದೇ ದ್ವಂದ್ವ ನಿಲುವು ಅನುಸರಿಸಿದರೆ ಸರಕಾರದ ವಿರುದ್ಧ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲೆಡೆ ತೀವ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಉಭಯ ನಾಯಕರು ಎಚ್ಚರಿಕೆ ನೀಡಿದರು.ಸಮಿತಿಯ ಪೆÇ್ರ.ಬಸವರಾಜ ಕುಮನೂರು, ಡಾ.ಮಾಜಿದ್ ದಾಗಿ ಇದ್ದರು.