ಮೇ 26ರಂದು ಕೋಲಿನೌಕರರ ಸಮಾವೇಶ
ಕಲಬುರಗಿ,ಮೇ.21: ಜಿಲ್ಲಾ ಕೋಲಿ (ಕಬ್ಬಲಿಗ) ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇದೇ ಮೇ 26ರಂದು ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾ ನ್ಯಾಯಾಲಯ ಎದುರಿನ ವಿಶ್ವೇಶ್ವರಯ್ಯ ಭವನದಲ್ಲಿ ಕೋಲಿ (ಕಬ್ಬಲಿಗ) ನೌಕರರ ಜಿಲ್ಲಾ ಸಮಾವೇಶ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನೀಲಕಂಠ ಜಮಾದಾರ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದೇ ಸಮಾವೇಶದಲ್ಲಿ ‘ಸ್ನೇಹ ಸಂಗಮ’ ಪರಿಷ್ಕøತ ಪರಿಚಯ ಗ್ರಂಥ ಲೋಕಾರ್ಪಣೆ ನಡೆಯಲಿದೆ ಎಂದರು.
ಹಾವೇರಿ ಜಿಲ್ಲೆಯ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಕರ್ನಾಟಕ ರಾಜ್ಯ ಗಂಗಾ ಮತ ನೌಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಎಂ. ಶ್ರೀನಿವಾಸ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.
ಇನ್ನು ಸಮಾವೇಶದಲ್ಲಿ ಸ್ನೇಹ ಸಂಗಮ ಪರಿಚಯ ಗ್ರಂಥವನ್ನು ಅಂತಾರಾಷ್ಟ್ರೀಯ ಸಾಮಾಜಿಕ ದರ್ಶನ ಕಾಂಗ್ರೆಸ್ ಹಾಗೂ ಅಂತಾರಾಷ್ಟ್ರೀಯ ಯೋಗ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಡಾ.ಬಸವರಾಜ ಸಿದ್ಧಾಶ್ರಮ ಲೋಕಾರ್ಪಣೆ ಮಾಡಲಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯೆ ಹಾಗೂ ಸಾಹಿತಿ ನಾಗಾಬಾಯಿ ಬುಳ್ಳಾ ನೌಕರರ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಹರ್ಷಿ ವೇದವ್ಯಾಸ ಮತ್ತು ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಮುಕ್ಕಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಜಿಲ್ಲಾ ಕೋಲಿ (ಕಬ್ಬಲಿಗ) ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಜಮಾದಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಗಂಗಾ ಮತ ನೌಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಹಾಲೇಶಪ್ಪ ಸಮಾವೇಶದಲ್ಲಿ ಉಪಸ್ಥಿತರಿರುತ್ತಾರೆ ಎಂದರು.
ಇದೇ ಸಮಾವೇಶದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು, ಪಿಎಚ್‍ಡಿ ಪದವಿ ಪಡೆದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ನಿವೃತ್ತ ಸರಕಾರಿ ನೌಕರರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಮಾದಾರ್ ನುಡಿದರು.
ಸಂಘದ ಗೌರವಾಧ್ಯಕ್ಷ ನಾಮದೇವ ಕಡಕೋಳ, ಕಾರ್ಯಾಧ್ಯಕ್ಷ ಧರ್ಮರಾಜ ಜವಳಿ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ತಳವಾರ, ಪ್ರಚಾರ ಸಮಿತಿಯ ಅಧ್ಯಕ್ಷ ಸಿದ್ದಪ್ಪ ಜಿ.ಮಹಾಗಾಂವ್, ರಾಜೇಂದ್ರ ಝಳಕಿ, ತುಕಾರಾಂ ಚಿತ್ತಾಪುರ, ಅವ್ವಣ್ಣ ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.