ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಧರಣಿ
ತಾಳಿಕೋಟೆ:ಮೇ.21: ತಾಲೂಕಿನ ಅಸ್ಕಿ, ಬೆಕಿನಾಳ ಮತ್ತು ಬೂದಿಹಾಳ ಪಿ.ಟಿ ಕೆರೆ ನೀರು ತುಂಬುವಂತೆ ಆಗ್ರಹಿಸಿ ಇಂದಿನಿಂದ ದಿ.21 ಮಂಗಳವಾರರಿಂದ ಅಸ್ಕಿ ಕೆರೆಯಲ್ಲಿ ನೂರಾರು ರೈತರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಮಾಡಿ ಕರೆಗೆ ನೀರು ತುಂಬಿಸುವ ಕಾರ್ಯ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಪದಾಧಿಕಾರಿಗಳು ಸೋಮವಾರರಂದು ತಹಶಿಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ತಾಳಿಕೋಟೆ ತಾಲೂಕಿನ ಅಸ್ಕಿ ಕೆರೆಯೂ ಜಿಲ್ಲೆಯಲ್ಲಿಯೇ ಅತೀದೊಡ್ಡ ಕೆರೆಯಾಗಿದ್ದು, ಹಾಗೂ ಬೆಕಿನಾಳ ಮತ್ತು ಬೂದಿಹಾಳ ಪಿ. ಟಿ. ಕೆರೆಗಳಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ 5-6 ಹಳ್ಳಿಗಳ ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಮಾತ್ರವಲ್ಲದೇ, ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಮೂಲಗಳು ಅಭಿವೃದ್ಧಿ ಹೊಂದುತ್ತವೆ. ಇದರಿಂದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗಲಿದೆ ಎಂದು ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈಗಾಗಲೇ ಕರ್ನಾಟಕ ರಾಜ್ಯ ರೈತ ಸಂಘಹಾಗೂ ಹಸಿರು ಸೇನೆ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಈ ಕುರಿತು ಪತ್ರಿಕಾ ವರದಿಗಳು ಸಹ ಬಂದಿರುತ್ತವೆ. ಜಿಲ್ಲೆಯ ಎಲ್ಲಾ ಕೆರೆಗಳು ತುಂಬುತ್ತಿದ್ದರು, ಅಸ್ಕಿ, ಬೆಕಿನಾಳ ಹಾಗೂ ಬೂದಿಹಾಳ ಪಿ. ಟಿ.ಕೆರೆ ಮಾತ್ರ ತುಂಬದೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೆ ಕೆರೆ ನೀರು ತುಂಬದೇ ಪುರಾಣ ಹೇಳುತ್ತಿದ್ದಾರೆ, ಕೇಳಿದರೆ ನಿಮಗೆ ನೀರು ಬರುವುದಿಲ್ಲ, ನೀವೂ ಮೇಲಿನ ಅಧಿಕಾರಿಗಳಿಗೆ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಮಂಗಳವಾರ ಸಾಯಂಕಾಲದೊಳಗೆ ಕೆರೆಗಳಿಗೆ ನೀರು ಹರಿಸದಿದ್ದರೆ ಸಾವಿರಾರು ರೈತರೊಂದಿಗೆ ಕೆರೆಯಲ್ಲಿಯೆ ಕುಳಿತು ಧರಣಿ ಸತ್ಯಾಗ್ರಹವನ್ನು ಪ್ರಾರಂಬಿಸುತ್ತೇವೆಂದು ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಇದರಲ್ಲಿಯೂ ನಿರ್ಲಕ್ಷ ಧೋರಣೆ ಅನುಸರಿಸಿದಲ್ಲಿ ರೈತರ ನಿರ್ಣಯದಂತೆ ಮುಂದೆ ಅಮರಣ ಉಪವಾಸ ಸತ್ಯಾಗ್ರಹ ನಡೆಸಲು ಕೂಡಾ ತಿರ್ಮಾನಿಸಲಾಗಿದ್ದು ಅದಕ್ಕೆ ಅವಕಾಶ ನೀಡದೇ ಜಿಲ್ಲಾಧಿಕಾರಿಗಳು/ ತಾಲೂಕಾ ತಹಶಿಲ್ದಾರರು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕೆರೆ ತುಂಬಿಸುವಂತೆ ಆದೇಶಿಸಬೇಕೆಂದು ತಹಶಿಲ್ದಾರರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮನವಿ ಪತ್ರವನ್ನು ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರಿಗೆ ರೈತ ಸಂಘದ ಪದಾಧಿಕಾರಿಗಳು ಸಲ್ಲಿಸಿದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಹಾಗೂ ಹಸಿರು ಸೇನೆ ಸಂಘಟನೆಯ ತಾಲೂಕಾ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಅಸ್ಕಿ ವಲಯ ಅಧ್ಯಕ್ಷ ಸಂಗನಗೌಡ ಬಿರಾದಾರ, ಬೆಕಿನಾಳ ವಲಯ ಅಧ್ಯಕ್ಷ ಡಿ.ಡಿ.ಪಾಟೀಲ, ರೈತರಾದ ಗೌಡಪ್ಪಗೌಡ ಹಳಿಮನಿ, ಮೈಬೂಬ ಗೊಬರಡಗಿ, ವೆಂಕಣ್ಣ ಗೊಲ್ಲಾಳ, ವೀರಗಂಟೆಪ್ಪ ಬ್ಯಾಕೋಡ, ಮಹ್ಮದ ಶೇಖ, ನಬೂಶಾ ಮಲ್ಲಾಡ, ಮಲ್ಲಿಕಾರ್ಜುನ, ಪರಶುರಾಮ ತಳವಾರ, ಸಾಯಬಣ್ಣ ಗುಂಡಕನಾಳ, ಮೊದಲಾದವರು ಇದ್ದರು.