ಹೆತ್ತ ತಾಯಿ ತಂದೆಯವರ ಸೇವೆಯೇ ದೇವರ ಸೇವೆಗೆ ಸಮ : ಶ್ರೀರಾಜೇಶ್ವರ ಶಿವಾಚಾರ್ಯರು
ಭಾಲ್ಕಿ:ಮೇ.21: ಹೆತ್ತ ತಂದೆ, ತಾಯಿಯ ಸೇವೆಯೇ ದೇವರ ಸೇವೆಗೆ ಸಮ, ಬಾಳಿಗೆ ಬೆಳಕಾದ ತಾಯಿ ತಂದೆ ಸೇವೆಯಿಂದ ಸಂತೃಪ್ತಿ ಕಾಣಬೇಕು ಎಂದು ಕಟ್ಟಿಮನಿ ಹಿರೇಮಠ ಸಂಸ್ಥಾನ ಮೆಹಕರ, ತಡೋಳಾದಾ ಶ್ರೀ ರಾಜೇಶ್ವರ ಶಿವಾಚಾರ್ಯರು ಪ್ರತಿಪಾದಿಸಿದರು.
ತಾಲೂಕಿನ ಮೊರಂಬಿ ಗ್ರಾಮದಲ್ಲಿ ಸೋಮವಾರ ನಡೆದ ಮಹಾದೇವ ಮಂದಿರದ ಕಳಸಾರೋಹಣ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಮಂದಿರ ಗ್ರಾಮಸ್ಥರೆಲ್ಲರೂ ಸೇರಿ ಕಟುತ್ತಾರೆ, ಆದರೆ ಆ ಮಂದಿರದ ಮುಕುಟ ಮಣಿಯಾದ ಕಳಸಾರೋಹಣ ಕಾರ್ಯಕ್ರಮ ಮಾತ್ರ ಲೇಕ ಮಾತೆಯರಿಂದ ನಡೆಸಿಕೊಡುವರು. ಲೇಕ ಮಾತೆಯರೆಂದರೆ ಮದುವೆಯಾಗಿ ಬೇರೆ ಗ್ರಾಮಕ್ಕೆ ತೆರಳಿದ ಗ್ರಾಮದ ಮಹಿಳೆಯರು. ಗ್ರಾಮದಿಂದ ಹೊರಹೋದ ಎಲ್ಲಾ ಲೇಕ ಮಾತೆಯರಿಗೆ ಗ್ರಾಮಕ್ಕೆ ಕರೆಯಿಸಿ, ಅವರಿಂದ ಕಾಣಿಕೆ ಪಡೆದು ಕಳಸಾರೋಹಣ ಕಾರ್ಯಕ್ರಮ ನಡೆಸಿಕೊಡುವುರು. ಲೇಕ ಮಾತೆಯರು ಗ್ರಾಮದಲ್ಲಿಯ ತವರು ಮನೆಗಿಂತಲೂ ಗ್ರಾಮ ದೇವತೆಯ ಮೇಲೆ ಇಟ್ಟಿರುವ ಪ್ರೀತಿ ದೊಡ್ಡದ್ದು, ಅವರು ಕಳಸಾರೋಹಣ ನಿಮಿತ್ಯ ತವರು ಮನೆಗೆ ಆಗಮಿಸಿ, ಅಣ್ಣ, ತಮ್ಮ, ಅತ್ತಿಗೆಯರೊಂದಿಗೆ ಬೆರೆತು, ತಂದೆ ತಾಯಿಯ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುವ ವಾಡಿಕೆ ಇದೆ. ತವರು ಮನೆಯಲ್ಲಿಯ ಕ್ಲಿಷ್ಟಕರ ಸಮಸ್ಯೆಗಳನ್ನೂ ಲೇಕ ಮಾತೆಯರು ಬಗೆಹರಿಸುವರು. ಹೀಗಾಗಿ ಕಳಸಾರೋಹಣ ಕಾರ್ಯಕ್ರಮಕ್ಕೆ ಲೇಕ ಮಾತೆಯರಿಂದಲೇ ಕಾಣಿಕೆ ಪಡೆಯಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಪಂಢರಾಪುರದ ವಿಠಲ ರುಕ್ಮಿಣಿ ಮಂದಿರದ ಅಧ್ಯಕ್ಷ ಶ್ರೀ ಗಹಿನಿನಾಥ ಮಹಾರಾಜ ಔಸೇಕರ, ಪ್ರತಿಯೊಂದು ಗ್ರಾಮಗಳಲ್ಲಿಯೂ ಮಂದಿರಗಳಿರುತ್ತವೆ. ಮನುಷರು ಮಂದಿರಕ್ಕೆ ನಮಸ್ಕರಿಸಲು ಹೋಗುವುದು ವಾಡಿಕೆ. ಆದರೆ ಮನುಷ್ಯನಿಗೆ ಅತಿ ದು:ಖವಾದಾಗಲೂ ಮಂದಿರಕ್ಕೆ ಬಂದು ಪೂಜೆ ಸಲ್ಲಿಸುವರು. ಅತೀ ಸುಖವಾದಾಗಲೂ ಮಂದಿರಕ್ಕೆ ಆಗಮಿಸಿ ಪೂಜಿಸುವರು. ಪ್ರತಿ ಗ್ರಾಮಗಳಲ್ಲಿಯ ದೇವಾಲಯಗಳಿಂತಲೂ ಮೊರಂಬಿ ಗ್ರಾಮದ ಮಹಾದೇವ ಮಂದಿರಕ್ಕೆ ವಿಶೇಷತೆ ಇದೆ. ಸುಮಾರು 50 ವರ್ಷಗಳ ಹಿಂದೆ ಮೊರಂಬಿ ಶರಣ ಬಸವೇಶ್ವರ ದೇವಸ್ಥಾನದ ನಿರ್ಮಾತೃ ಶ್ರೀ ಮಹಾದೇವಪ್ಪ ಗುಂದಗೆಯವರು ಸ್ಥಾಪಿಸಿದ ಈ ಪುರಾತನ ಮಹಾದೇವರ ದೇವಾಲಯಕ್ಕೆ ಗ್ರಾಮದ ಯುವಕರು, ಹಿರಿಯರು ಸೇರಿ ಭವ್ಯ ಮಂದಿರ ನಿರ್ಮಿಸಿ, ಗ್ರಾಮದ ಲೇಕ ಮಾತೆಯರಿಂದ ಕಳಸಾರೋಹಣ ಮಾಡಿಸುತ್ತಿರುವುದು ನಿಜಕ್ಕೂ ಪ್ರಶಂಶನಾರ್ಹವಾಗಿದೆ. ಮಂದಿರದ ಕಳಸಕ್ಕೆ ತುಂಬಾ ಮಹತ್ವವಿದೆ. ದೇಹದಮೇಲಿನ ಮುಖಕ್ಕಿರುವ ಕಿಮ್ಮತ್ತು ದೇವಾಲಯದ ಮೇಲಿನ ಕಳಸಕ್ಕಿದೆ. ಹೀಗಾಗಿ ಕಳಸವಿಲ್ಲದಿದ್ದರೆ ಮಂದಿರಕ್ಕೆ ಬೆಲೆಯಿಲ್ಲ. ಗ್ರಾಮದ 751 ಲೇಕ ಮಾತೆಯರು ಸೇರಿ ಕಳಸಾರೋಹಣ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟಿರುವುದು ಎಲ್ಲರೂ ಮೆಚ್ಚುವಂತಹ ಕಾರ್ಯವಾಗಿದೆ ಎಂದು ಹೇಳಿದರು.
ಮುಚಳೊಂಬಿಯ ನಾಗಭೂಷಣ ಶಿವಯೋಗಿ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಮಾನವೀಯ ಮೌಲ್ಯಗಳಕುರಿತು ಆಶಿವರ್ಚನ ನೀಡಿದರು. ಇದೇವೇಳೆ ಅಡವಿ ಸಿದ್ದೇಶ್ವರ ಮಠದ ಅಶೋಕ ಮಹಾಲೀಂಗ ಸ್ವಾಮಿ ದಂಪತಿಗಳಿಗೆ ದೇವಸ್ಥಾನ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಕಟ್ಟಿಮನಿ ಹಿರೇಮಠ ಸಂಸ್ಥಾನದ ಶ್ರೀ ರಾಜೇಶ್ವರ ಶಿವಾಚಾರ್ಯರಿಂದ ಶಿವದೀಕ್ಷೆ ಹಾಗು ಜಪಯಜ್ಞ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಮದಕಟ್ಟಿಯ ಕೀರ್ತನಕಾರ ಸುರೇಶ ಮಹಾರಾಜ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಸಂತೋಷ ಬಿಜಿ ಪಾಟೀಲ, ಭದ್ರೇಶ ಸ್ವಾಮಿ, ಶಣ್ಮುಖಪ್ಪ ಉಚ್ಚೇಕರ, ವಿಜಯಕುಮಾರ ವಾರದ, ಅಂಕುಶರಾವ ಪಾಟೀಲ, ನರಸಿಂಗ ಕಾಂಗಲೆ, ಅಮೃತ ಪಾಟೀಲ, ಶರಣಪ್ಪಾ ಕಾಗೆ, ನಾಗೇಶ ಪ್ರಥ್ವಿರಾಜ ಮೇತ್ರೆ, ಶ್ರೀಧರ ವಿಶ್ವನಾಥ ಪಾಟೀಲ ಉಪಸ್ಥಿತರಿದ್ದರು.
ವಿಯಕುಮಾರ ವಾರದ ಸ್ವಾಗತಿಸಿದರು. ಅವಿನಾಶ ಸ್ವಾಮಿ ನಿರೂಪಸಿದರು. ಸುನೀಲ ಮಾಗಾವೆ ವಂದಿಸಿದರು.