ಮಲೆನಾಡು, ಕರಾವಳಿಯಲ್ಲಿ ವರ್ಷಧಾರೆ
ಬೆಂಗಳೂರು, ಮೇ. ೨೧- ರಾಜ್ಯದ ಹಲವೆಡೆ ವರುಣನ ಅಬ್ಬರ ಮುಂದುವರೆದಿದ್ದು, ಜನಜೀವನ ಏರುಪೇರಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಕರಾವಳಿ ಭಾಗದಲ್ಲೂ ಭಾರೀ ಮಳೆಗೆ ಜನ ತತ್ತರಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಸಂಜೆ ನಗರ ಸೇರಿದಂತೆ ಹೊರವಲಯದ ಪ್ರದೇಶಗಳಲ್ಲಿ, ಸರಿಸುಮಾರು ೧ ಗಂಟೆಗೂ ಅಧಿಕ ಕಾಲ ಭಾರೀ ವರ್ಷಧಾರೆಯಾಯಿತು.
ಎಡೆಬಿಡದೆ ಸುರಿದ ಮಳೆಗೆ ಹಲವೆಡೆ ಚರಂಡಿ, ರಾಜಕಾಲುವೆಗಳು ಉಕ್ಕಿ ಹರಿದವು. ಇದರಿಂದ ಕೆಲ ರಸ್ತೆಗಳು ಸಂಪೂರ್ಣ ಜಲಮಯವಾಗಿದ್ದವು. ಅಕ್ಷರಶಃ ಕೆರೆಯಂತಾಗಿ ಪರಿವರ್ತಿತವಾಗಿದ್ದವು. ಇದರಿಂದ ಕೆಲ ಸಮಯ ಜನ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು.
ಕಳೆದ ಹಲವು ತಿಂಗಳುಗಳಿಂದ ನಗರವು ಬಿರು ಬಿಸಿಲಿಗೆ ಸಾಕ್ಷಿಯಾಗಿತ್ತು. ಮಳೆ ಕಣ್ಮರೆಯಾಗಿತ್ತು. ಆದರೆ ಕಳೆದೊಂದು ವಾರದಿಂದ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಬಿಸಿಲ ಬೇಗೆಯ ನಡುವೆಯೇ ಭಾರೀ ಮಳೆಯಾಗುತ್ತಿದೆ. ಇದು ನಾಗರೀಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಆದರೆ ಭಾರೀ ಮಳೆಗೆ ನಗರದ ಕೆಲ ತಗ್ಗು ಪ್ರದೇಶಗಳಲ್ಲಿ ಜಲಾವೃತ ಸಮಸ್ಯೆ ಎದುರಾಗುತ್ತಿರುವುದು ನಾಗರೀಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ನಾನಾ ರೀತಿಯ ಸಮಸ್ಯೆ ಎದುರಿಸುವಂತಾಗಿದೆ. ಭಾನುವಾರದಂತೆ ಸೋಮವಾರ ಕೂಡ ಹಲವೆಡೆ ಮಳೆ ನೀರು ಕಟ್ಟಡಗಳಿಗೆ ನುಗ್ಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ವರುಣನ ಅಬ್ಬರಕ್ಕೆ ಕರಾವಳಿಯ ಜನರು ತತ್ತರಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ ೪೫ ಕಿ.ಮೀ. ವೇಗದಲ್ಲಿ ೫೫ ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರಿಕೆಗೆ ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮಂಗಳೂರಿನಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಇಂದಿನಿಂದ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಭಾರೀ ಮಳೆಗೆ ಶಾಲಾ ಕಾಂಪೌಂಡ್ ಕುಸಿದು ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ನಡೆದಿದೆ.ನ್ಯೂಪಡ್ಪು ಶಾಲೆಯಲ್ಲಿ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸಿದ್ದ ೭ ವರ್ಷದ ಶಾಜಿಯಾ ಎಂಬ ವಿದ್ಯಾರ್ಥಿನಿ ಗೇಟ್ ಬಳಿ ಆಟವಾಡುತ್ತಿದ್ದಾಗ ಕಾಂಪೌಂಡ್ ಕುಸಿದು ಈ ಅವಘಡ ಸಂಭವಿಸಿದೆ.ಕರಾವಳಿ ಜಿಲ್ಲೆ ಉಡುಪಿಯಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತಿದೆ. ಸುಡುವ ಬಿಸಿಲಿನ ನಡುವೆ ಮೋಡ ಕವಿದ ವಾತಾವರಣವಿರುವುದರಿಂದ ಆರ್ದ್ರತೆ ಹೆಚ್ಚುತ್ತಿದೆ. ಕುಂದಾಪುರ ಬಿಂದೂರಿನಲ್ಲಿ ೩೭ ಸೆ. ತಾಪಮಾನ ದಾಖಲಾಗಿದೆ. ತಾಪಮಾನದ ನೇರ ಪರಿಣಾಮ ಸಮುದ್ರದ ಮೇಲೆ ಬಿದ್ದಿದ್ದು, ಸಮುದ್ರ ಪ್ರಕ್ಷುಬ್ಧವಾಗಿದೆ. ಈ ವಾರ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ. ಭಾರಿ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಭಾರೀ ಮಳೆಯಿಂದಾಗಿ ಮಂಗಳೂರಿನ ಹೆದ್ದಾರಿ, ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೆಲವೆಡೆ ಹಳ್ಳಗಳಂತೆ ನೀರು ಹರಿಯುತ್ತಿದೆ. ಕೊಟ್ಟಾರ ಕ್ರಾಸ್ ನಲ್ಲಿ ಸಂಜೆಯಿಂದ ರಾತ್ರಿವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಳೆ ಬಂದಿದ್ದರಿಂದ ಕೆಲಸ -ಕಾರ್ಯ ಮುಗಿಸಿ ಸಂಜೆ ಮನೆಗೆ ಮರಳುತ್ತಿದ್ದವರು ತೊಯ್ದು ತೊಪ್ಪೆಯಾದರು.
ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಕುಶಾಲನಗರದಲ್ಲಿ ಭಾರೀ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕಾವೇರಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಜನರು ಮನೆಯಿಂದ ಹೊರಗೆ ಬರಲಾಗದೆ ಪರದಾಡುತ್ತಿದ್ದಾರೆ. ೨೦೧೮ರಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಕೊಡಗು ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಆತಂಕದಲ್ಲಿದೆ. ಇನ್ನೂ ಮೂರು ದಿನ ಇದೇ ರೀತಿ ಮಳೆಯಾಗಲಿದೆ.
ಕೊಪ್ಪ, ಕೊಡಗು ಗಡಿ ಸಮೀಪದ ಹಾರನಹಳ್ಳಿಯಲ್ಲಿ ಭಾರೀ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ಕಾಲುವೆಯಲ್ಲಿ ನೀರು ಹರಿಯುವ ಸೇತುವೆ ಪಕ್ಕದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಸಂಪರ್ಕ ಕಡಿತಗೊಂಡಿದೆ.
ಇದರಿಂದ ಗ್ರಾಮಗಳಿಗೆ ಹೋಗುವ ವಾಹನ ಸವಾರರು, ಕೂಲಿ ಕಾರ್ಮಿಕರು, ಶಾಲಾ ಕಾಲೇಜು ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಈ ರಸ್ತೆಯನ್ನು ವರ್ಷದ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರು
ತಾಲೂಕಿನಾದ್ಯಂತ ಕಳೆದ ರಾತ್ರಿ ಸುರಿದ ಬಿರುಗಾಳಿ ಮಳೆಯಿಂದ ರೈತರಿಗೆ ಅಪಾರ ನಷ್ಟವಾಗಿದ್ದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ನೇತೃತ್ವದ ಅಧಿಕಾರಿಗ ಳು ಅನೇಕ ಪ್ರದೇಶಗಳಿಗೆ ಭೇಟಿ ನೀಡಿ, ಗ್ರಾಮಲೆಕ್ಕಿಗರು, ಸಹಾಯಕರಿಂದ ಮಾಹಿತಿ ಪಡೆದಿದ್ದು ಅಂದಾಜು ೩೦ ಲಕ್ಷ ಕ್ಕೂ ರೂಗಿಂತ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ತಾಲೂಕಿನ ಬಿಳಿಚೋಡು ಹೋಬಳಿಯ ಮುಷ್ಟಿಗರಹಳ್ಳಿ ವೃತ್ತದ ಗುಡ್ಡದಲಿಂಗಣ್ಣನಹಳ್ಳಿ ಗ್ರಾಮದ ನಾಗರಾಜಪ್ಪ ಎಂಬುವರ ಒಂದು ಆಕಳು ಸಿಡಿಲು ಬಡೆದು ಸ್ಥಳದಲ್ಲಿ ಮೃತಪಟ್ಟಿದೆ.ಸೊಕ್ಕೆ ಹೋಬಳಿಯ ಕೆಳಗೋಟೆ ಗ್ರಾಮದಲ್ಲಿ ೩ ಮನೆ ಅಣ ಬೂರು ಗ್ರಾಮದಲ್ಲಿ ಕಲ್ಲಮ್ಮ ನಾಗರಾಜ ಎಂಬುವವರ ಒಂದು ಮನೆ ಭಾಗಂಶ ಹಾನಿಯಾಗಿವೆ, ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಸಂಜೆವಾಣಿಗೆ ತಿಳಿಸಿದ್ದಾರೆ .ಜಗಳೂರು ತಾಲೂಕಿನ ಎಲ್ಲೆಲ್ಲಿ ಎಷ್ಟು ಮಳೆ:
ಜಗಳೂರು ತಾಲೂಕು ಕಸಬಾ ಹೋಬಳಿ ೩೬ ಮಿ.ಮೀ, ಬಿಳಿಚೋಡು ೪೩.ಮಿಮೀ, ಸೊಕ್ಕೆ ಹೋಬಳಿಯಲ್ಲಿ ೬೯ ಮಿಮೀ ಮಳೆಯಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಸರಾಸರಿ ೪೯ ಮಿಮೀ ತಾಲೂಕಿನಲ್ಲಿ ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮಾಹಿತಿ ನೀಡಿದ್ದಾರೆ.
ಕಾರು ಜಖಂ
ಮರ ಬಿದ್ದು ಕಾರು ಜಖಂಗೊಂಡ ಘಟನೆ ಮಂಗಳವಾರ ಬೆಳಗ್ಗೆ ಕೆ.ಆರ್. ರಸ್ತೆಯಲ್ಲಿ ಸಂಭವಿಸಿದೆ.
ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹರಪನಹಳ್ಳಿ ತಾಲೂಕಿನ ಕವಲಹಳ್ಳಿ ಗ್ರಾಮದ ಜನಾರ್ದನ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದವವರು.
ದಾವಣಗೆರೆಯಿಂದ ಕವಲಹಳ್ಳಿಗೆ ತೆರಳು ತ್ತಿದ್ದಾಗ ಅಶೋಕ ಚಿತ್ರಮಂದಿರ ಹಿಂಭಾಗದಲ್ಲಿ ಮರದ ಬೃಹತ್ ಕೊಂಬೆ ಕಾರಿನ ಮೇಲೆ ಬಿದ್ದಿದೆ.ಕ್ಷಣಾರ್ಧದಲ್ಲಿ ವಿದ್ಯುತ್ ಕಂಬವೂ ಕಾರಿನ ಮೇಲೆ ಬಿದ್ದಿದೆ.
ಆದರೆ, ಯಾವುದೇ ಅಪಾಯವಾಗಿಲ್ಲ.
ದಾವಣಗೆರೆಯಲ್ಲಿ ಗೊಬ್ಬರದ ಅಂಗಡಿ ಇದೆ. ಎಂದಿನಂತೆ ಕವಲಹಳ್ಳಿಗೆ ಹೋಗುತ್ತಿದ್ದೆ. ನನ್ನ ಮುಂದೆ ಹೋಗುತ್ತಿದ್ದ ವೆಹಿಕಲ್ ಮೇಲೆ ಸಣ್ಣ ಅರೆ ಬಿತ್ತು. ನೋಡ ನೋಡತ್ತಿದ್ದಂತೆಯೇ ಮರದ ದೊಡ್ಡ ಕೊಂಬೆ, ಕರೆಂಟ್ ಕಂಬ ಬಿದ್ದವು. ದೇವರು ದೊಡ್ಡವನು ಏನೂ ಅಪಾಯ ಆಗಲಿಲ್ಲ ಎಂದು ಜನಾರ್ದನ್ ತಿಳಿಸಿದರು.ಮರ ಬಿದ್ದ ಪರಿಣಾಮ ಸಂಚಾರಕ್ಕೆ ವ್ಯತ್ಯಯ ಆಗಿತ್ತು. ನಗರಪಾಲಿಕೆ, ಪೊಲೀಸ್ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.