ಸರಿಯಾಗಿ ಕರ ವಸೂಲಿ ಮಾಡಿ: ಮೆಕ್ಕಳಕಿ
ಗುಳೇದಗುಡ್ಡ, ಮೇ21: ಪುರಸಭೆಯ ಆಸ್ತಿ ಕರ, ನೀರಿನ ಕರ, ಅಂಗಡಿ ಲೈಸೆನ್ಸ್ ಫೀ ಸೇರಿದಂತೆ ಪುರಸಭೆಯ ಆದಾಯ ಮೂಲವಾದ ಕರಗಳು ವಸೂಲಿ ಆಗುತ್ತಿಲ್ಲ, ನೀವು ಏನು ಮಾಡುತ್ತಿದ್ದೀರಿ? ಪುರಸಭೆ ಕರವನ್ನು ಸರಿಯಾಗಿ ವಸೂಲಿ ಮಾಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಪುರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಅವರು ಪುರಸಭೆಗೆ ಭೇಟಿ ನೀಡಿ, ಸಿಬ್ಬಂದಿ ಸಭೆಯಲ್ಲಿ ಮಾತನಾಡಿ, ಪುರಸಭೆ ಆದಾಯ ವಸೂಲಿ ಮಾಡದೇ ಇದ್ದರೆ ಪಟ್ಟಣದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಪುರಸಭೆಯ ಮಳಿಗೆಯ ಬಾಡಿಗೆಯನ್ನು ಸರಿಯಾಗಿ ತುಂಬುತ್ತಿಲ್ಲ. ಅಂತವರ ಮೇಲೆ ಸೀಜ್ ಮಾಡಬೇಕು. ಲೈಸೆನ್ಸ್ ಪಡೆಯದೇ, ನವೀಕರಣ ಮಾಡದೇ ಇರುವ ಹೊಟೇಲ್, ಖಾನಾವಾಳಿ, ಅಂಗಡಿ, ಉದ್ಯಮಗಳ ಮೇಲೂ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಚೇರಿ ಕೆಲಸಕ್ಕೆ ಆಗಮಿಸುವ ಸಾರ್ವಜನಿಕರ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಅವರನ್ನು ಅಲೆದಾಡಿಸಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ನಿಮ್ಮ ಮೇಲೆ ಸೂಕ್ತ ಕ್ರಮತೆಗೆದುಕೊಳ್ಳಲಾಗುವುದು ಎಂದು ಸಿಬ್ಬಂದಿಗೆ ಎಚ್ಚರಿಸಿದರು. ನೀರು ಸರಬರಾಜು ಪೌರಕಾರ್ಮಿಕರ ಸಿಬ್ಬಂದಿಯ ವೇತನ ವಿಳಂಬವಾಗಿದ್ದು ನನ್ನ ಗಮನಕ್ಕೆ ಬಂದಿದ್ದು, ಅವರಿಗೆ ಶೀಘ್ರ ವೇತನ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದರು.
ಪಟ್ಟಣದಲ್ಲಿ ಬೀದಿದೀಪದ ನಿರ್ವಹಣೆ ಸರಿಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಬೀದಿದೀಪ ದುರಸ್ತಿಗೆ ಸಾಮಾಗ್ರಿ ಇಲ್ಲ ಎಂದು ಗುತ್ತಿಗೆದಾರರು ನೆಪಹೇಳುತ್ತಿದ್ದಾರೆ. ಈ ಬಗ್ಗೆ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳುವಂತೆ ಪುರಸಭೆ ಸದಸ್ಯೆ ರಾಜಶೇಖರ ಹೆಬ್ಬಳ್ಳಿ, ಶಂಕ್ರಪ್ಪ ಹುಲಮನಿ ಆಗ್ರಹಿಸಿದರು. ಸರಿಯಾಗಿ ಬೀದಿದೀಪ ನಿರ್ವಹಣೆ ಮಾಡುವಂತೆ ಸಭೆಯಲ್ಲಿ ಸೂಚಿಸಿದ್ದೇನೆ ಎಂದು ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಹೇಳಿದರು.
ಬಳಿಕ ಗುಳೇದಗುಡ್ಡ ತಾಂಡಾ ಹಾಗೂ ಕಸವಿಲೇವಾರಿ ಘಟಕಗಳಿಗೆ ಭೇಟಿ ನೀಡಿ, ತಾಂಡಾದಲ್ಲಿ ನೀರಿನ ಸಮಸ್ಯೆ ಇದೆ. ಈಗಾಗಲೇ ನಿರ್ಮಿಸಿರುವ ಓವರ್‍ಹೆಡ್ ಟ್ಯಾಂಕ್‍ಗೆ ನೀರಿನ ಪೈಪ್‍ನ ಸಂಪರ್ಕ ನೀಡಲು ಕ್ರಮಕೈಗೊಳ್ಳುವಂತೆ ತಾಂತ್ರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜನೀಯರ್ ಬಿ.ವೈ. ಸುರಕೋಡ, ಎಇಇ ವಿ.ಬಿ. ಹುಣಶಿಗಿಡದ, ಪುರಸಭೆ ಮುಖ್ಯಾಧಿಕಾರಿ ರಾಜೇಶ ಕೆ. ಪುರಸಭೆ ಇಂಜನೀಯರ್ ಎಂ.ಜಿ. ಕಿತ್ತಲಿ, ಮ್ಯಾನೇಜರ್ ಎ.ಎಚ್. ಮುದ್ದೇಬಿಹಾಳ ಮತ್ತಿತರರ ಇದ್ದರು.