ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆ
ಬಾದಾಮಿ,ಮೇ.21: ಯಾವುದೇ ಜೀವಿಗೆ ಹುಟ್ಟು ಸಾವು ಇರುತ್ತದೆ. ಇದರ ಮಧ್ಯದಲ್ಲಿ ಜೀವನ ಹೇಗೆ ನಡೆಸಬೇಕು. ಬದುಕುವ ಕಲೆಯನ್ನು ಕಲಿಸಿದ ಹೇಮರಡ್ಡಿ ಮಲ್ಲಮ್ಮನವರ ಜೀವನ ಮಹಿಳೆಯರಿಗೆ ಸ್ಪೂರ್ತಿಯಾಗಿದೆ ಎಂದು ಹರಿಹರ ತಾಲೂಕಿನ ಎರೆಹೊಸಳ್ಳಿ ವೇಮನ ಸಂಸ್ಥಾನಮಠದ ರಡ್ಡಿಗುರುಪೀಠದ ಶ್ರೀ ವೇಮನಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಹೇಮ ವೇಮ ಚಾರಿಟೇಬಲ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ 602 ನೇ ಜಯಂತ್ಯೋತ್ಸವ-2024 ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಶ್ರೀಶೈಲ ಮಲ್ಲಿಕಾರ್ಜುನ ಸಹಕಾರಿ ಸಂಘದ ಅಧ್ಯಕ್ಷ ವಿ.ಎಸ್.ದೇಸಾಯಿ, ನಿವೃತ್ತ ಶಿಕ್ಷಕ ಡಿ.ಪಿ.ಅಮಲಜರಿ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಗಂಗಲ್, ಪದ್ಮಾವತಿ ಹಾಜರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಿ.ಎಸ್.ಹೊಸಗೌಡ್ರ ಸ್ವಾಗತಿಸಿದರು. ಅಶೋಕ ಭಾವಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಿ.ಎಸ್.ನಾಗನೂರ ಕಾರ್ಯಕ್ರಮವನ್ನು ನಿರೂಪಿಸಿದರು. ಹೇಮಾ ನಾಲತನಾಡ ವಂದಿಸಿದರು.