ರೈತ ಉತ್ಪಾದಕರ ಸಂಸ್ಥೆಗಳಿಗೆ ಬಾಕಿ ಹಣಕ್ಕೆ ಆಗ್ರಹ
ಬೆಂಗಳೂರು, ಮೇ ೨೧- ರಾಜ್ಯ ಸರ್ಕಾರದ ಅಧೀನದ ರೈತ ಉತ್ಪಾದಕ ಸಂಸ್ಥೆಗಳಿಗೆ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಬಿಜೆಪಿ ರಾಜ್ಯ ರೈತ ಮೋರ್ಚ ಒತ್ತಾಯಿಸಿದೆ.
ಈ ಸಂಬಂಧ ಬಿಜೆಪಿ ರಾಜ್ಯ ರೈತ ಮೋರ್ಚ ಬೆಂ. ನಗರ ಜಿಲ್ಲಾಧ್ಯಕ್ಷ ಜಿ.ಜೆ.ಮೂರ್ತಿ ನಿಯೋಗ ಬೆಂ. ನಗರ ಜಿಲ್ಲಾಧಿಕಾರಿ ದಯಾನಂದ್ ಅವರಿಗೆ ಮನವಿ ಪತ್ರ ಸಲ್ಲಿಸಿ, ರೈತರ ಬಾಕಿ ಹಣವನ್ನು ನೀಡುವಂತೆ ಒತ್ತಾಯಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ೪೯೦ ರೈತ ಉತ್ಪಾದಕರ ಸಂಸ್ಥೆಗಳು ರಚನೆ ಮಾಡಿ ಸುಮಾರು ೧೫೦ ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು ಈ ಪೈಕಿ ಶೇ೧೨ರಷ್ಟು ಮಾತ್ರ ಅನುದಾನ ಬಿಡುಗಡೆ ಮಾಡಲಾಗಿತ್ತು. ಇದೀಗ ಶೇ.೮೨ರಷ್ಟು ಬಾಕಿ ಉಳಿದಿದೆ.ಕಾಂಗ್ರೆಸ್ ಸರ್ಕಾರ ಬಾಕಿ ಉಳಿದಿರುವ ಹಣವನ್ನು ಕೂಡಲೇ ಬಿಡುಗಡೆಮಾಡಬೇಕೆಂದು ಬಿಜೆಪಿ ರಾಜ್ಯ ರೈತ ಮೋರ್ಚ ಬೆಂ. ನಗರ ಜಿಲ್ಲಾಧ್ಯಕ್ಷ ಜಿ.ಜೆ.ಮೂರ್ತಿ ಮನವಿ ಮಾಡಿದರು.
ಹಣ ರೈತ ಉತ್ಪಾದಕರ ಸಂಸ್ಥೆಗಳ ಕೈಸೇರದಿರುವುದರಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ ೧೦ ಲಕ್ಷ ರೈತರು ಸೇರಿದಂತೆ ೧೨ ಸಾವಿರ ರೈತ ಉತ್ಪಾದಕ ಸಂಸ್ಥೆಗಳಿಗೆ ನಷ್ಟಕ್ಕೀಡಾಗುತ್ತಿವೆ. ಕೂಡಲೇ ಬಾಕಿ ಇರುವ ಅನುದಾನವನ್ನು ರೈತ ಉತ್ಪಾದಕರ ಸಂಸ್ಥೆಗಳಿಗೆ ಬಿಡುಗಡೆ ಮಾಡಿ ಅವುಗಳ ಅಭಿವೃದ್ಧಿಗೆ ಸಹಾಯ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಶೀಘ್ರದಲ್ಲಿ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನೀತಿಯ ವಿರುದ್ಧ ರಾಜ್ಯಾದ್ಯಂತ ಹೋರಾಟವನ್ನು ರೂಪಿಸಲಾಗುವುದೆಂದು ಎಚ್ಚರಿಕೆ ನೀಡಿದರು.