176 ಮೊಬೈಲ್ ಜಪ್ತಿ ಆಂಧ್ರದ ಇಬ್ಬರು ಸೆರೆ
ಬೆಂಗಳೂರು, ಮೇ.೨೧-ಜನಸಂದಣಿಯ ಬಸ್ ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆಂಧ್ರಪ್ರದೇಶ ಮೂಲದ ಕುಖ್ಯಾತ ಖದೀಮರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಉಪ್ಪಾರಪೇಟೆ ಪೊಲೀಸರು ೨೨.೪೦ ಲಕ್ಷ ಮೌಲ್ಯದ ವಿವಿಧ ಕಂಪನಿಗಳ ೧೭೬ ಮೊಬೈಲ್ ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶ ಮೂಲದ ನಾಗನೂರಿ ಕುಮಾರ್(೨೩)ಹಾಗೂ ಪುರುಷೋತ್ತಮ (೨೨)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿಂದ ೨೨.೪೦ ಲಕ್ಷ ಮೌಲ್ಯದ ೧೭೬ ವಿವಿಧ ಕಂಪನಿಯ ಮೊಬೈಲ್ ಗಳು ಮತ್ತು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಟಾಯೋಟಾ ಇಟಿಯಾಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಇವರ ಬಂಧನದಿಂದ ಉಪ್ಪಾರಪೇಟೆ ಪೊಲೀಸ್ ಠಾಣೆಯ ೩ ಮೊಬೈಲ್ ಕಳುವು ಪ್ರಕರಣ ಪತ್ತೆಯಾಗಿದ್ದು, ತನಿಖೆಯನ್ನು ಮುಂದುವರೆಸಲಾಗಿದೆ ಎಂದರು.
ಕಳೆದ ಏ.೨೨ ರಂದು ಮುಂಜಾನೆ ಶಿವಮೊಗ್ಗದಿಂದ ರೈಲಿನಲ್ಲಿ ಬೆಂಗಳೂರಿಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುವ ಸಲುವಾಗಿ ಬಸ್ ನಿಲ್ದಾಣಕ್ಕೆ ಬಂದ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನ ಮಾಡಿದ ದೂರನ್ನು ದಾಖಲಿಸಿದ ಇನ್ಸ್‌ಪೆಕ್ಟರ್ ಮಾರುತಿ ಮತ್ತವರ ಸಿಬ್ಬಂದಿ ಆಯಾಮಗಳಿಂದ ತನಿಖೆ ಕೈಗೊಂಡು, ಓರ್ವನನ್ನು ಬಿ.ಎಂ.ಟಿ.ಸಿ ಬಸ್ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಿಸಿ ಆತ ನೀಡಿದ ಮಾಹಿತಿಯನ್ನು ಆಧರಿಸಿ ಮೇ.೫ ರಂದು ಕಾರ್ಯಾಚರಣೆ ಕೈಗೊಂಡು ಬಾಗಲೂರಿನ ಗೋಪಾಲಪುರದಲ್ಲಿ ಇಬ್ಬರನ್ನು ಬಂಧಿಸಲಾಯಿತು ಎಂದು ತಿಳಿಸಿದರು.
ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್.ಎಸ್ ಅವರ ನೇತೃತ್ವದಲ್ಲಿ ಎಸಿಪಿ ರಮೇಶ್ ಕೆ.ಎಂ, ಉಪ್ಪಾರಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅವರ ತಂಡಕ್ಕೆ ೨೫ ಸಾವಿರ ನಗದು ಬಹುಮಾನ ಕಮೀಷನರ್ ನೀಡಿ ಅಭಿನಂದಿಸಿದರು.
ಐವರು ಸುಲಿಗೆಕೋರರ ಸೆರೆ:
ಮೊಬೈಲ್ ಗಳನ್ನು ಸುಲಿಗೆ ಮಾಡುತ್ತಿದ್ದ ಐವರನ್ನು ಬಂಧಿಸಿರುವ ಚಂದ್ರಲೇಔಟ್ ಪೊಲೀಸರು ೬,೩೧ ಲಕ್ಷ ಮೌಲ್ಯದ ೩೨ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ನಾಗರಭಾವಿ ಸುವರ್ಣ ಲೇಔಟ್ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಂದ ೧ ಲಕ್ಷ ಬೆಲೆ ಬಾಳುವ ಐಪೋನ್ ೧೪ಪ್ರೋ ಸುಲಿಗೆ ಮಾಡಿದ್ದ ದೂರು ಆಧರಿಸಿ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಐವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಮೊಬೈಲ್‌ನ ಫೈಂಡ್ ಮೈ ಡಿವೈಸ್ ಅಪ್ಲಿಕೇಷನ್ ಮುಖಾಂತರ ಓರ್ವನನ್ನು ಬಂಧಿಸಿ ಆತನು ನೀಡಿದ ಮಾಹಿತಿ ಮೇರೆಗೆ ಮತ್ತೆ ನಾಲ್ವರನ್ನು ಬಂಧಿಸಿ ಚಂದ್ರಲೇಔಟ್ ಪೊಲೀಸ್ ಠಾಣೆಯ ೩ ಮೊಬೈಲ್ ಸುಲಿಗೆ ಪ್ರಕರಣಗಳನ್ನು ಪತ್ತೆಹಚ್ಚಿ ತನಿಖೆಯನ್ನು ಮುಂದುವರೆಸಲಾಗಿದೆ ಎಂದರು.