ಬರ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ
ಗದಗ, ಮೇ 21: ಜಿಲ್ಲೆಯಲ್ಲಿ ಬರ ನಿರ್ವಹಣೆ ಸಮರ್ಪಕವಾಗಿ ನಿಭಾಯಿಸಬೇಕು. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಖುದ್ದಾಗಿ ನೀರಿನ ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕು ಎಂದು ಸಚಿವರಾದ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರ ನಿರ್ವಹಣೆ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಯಿರುವ ಸ್ಥಳಗಳಿಗೆ ಖಾಸಗಿ ಬೋರ್ವೆಲ್ ಮುಖಾಂತರವಾಗಲಿ ಅಥವಾ ಟ್ಯಾಂಕರ್ಗಳ ಮುಖಾಂತರವಾಗಲಿ ನೀರು ಪೂರೈಕೆಗೆ ಕ್ರಮ ವಹಿಸಬೇಕು. ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನಸಂದಣಿಯಿರುವ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆಗೆ ಸೂಚಿಸಿದರು.
ರೈತರಿಗೆ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗಬಾರದು. ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಈಗಾಗಲೇ ಸಹಾಯವಾಣಿ ( ಹೆಲ್ಪಲೈನ್) ಸ್ಥಾಪಿಸಲಾಗಿದ್ದು ಈ ಸಂಬಂಧ ಸಾರ್ವಜನಿಕರಿಂದ ಕರೆಗಳು ಬಂದಲ್ಲಿ ಅವುಗಳಿಗೆ ತಕ್ಷಣವೇ ಸ್ಪಂದಿಸುವ ಕಾರ್ಯವಾಗಬೇಕು ಎಂದರು.
ಅತೀವೃಷ್ಟಿ : ಹವಾಮಾನ ವರದಿಯ ಪ್ರಕಾರ ಮುಂಬರುವ ದಿನಗಳಲ್ಲಿ ಅತಿವೃಷ್ಟಿಯಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಅತೀವೃಷ್ಟಿ ಸಮರ್ಪಕ ನಿರ್ವಹಣೆಗೆ ಸರಿಯಾಗಿ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಅತೀವೃಷ್ಟಿ ಆವರಿಸಿದಲ್ಲಿ ತಕ್ಷಣವೇ ಸ್ಪಂದಿಸುವ ಕಾರ್ಯಕೈಗೊಳ್ಳಬೇಕು. ಜೀವ ಹಾನಿ ತಡೆಗೆ ಮುಂಜಾಗೃತೆಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಹ ಸಭೆಯಲ್ಲಿ ಸೂಚಿಸಲಾಯಿತು.
ಅನುದಾನದ ಕೊರತೆಯಿಲ್ಲ : ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸಲು ಅನುದಾನದ ಕೊರತೆಯಿಲ್ಲ. ಅಧಿಕಾರಿಗಳು ಅಗತ್ಯವಿದ್ದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗೆ ಖಾಸಗಿ ಬೋರ್ವೆಲ್, ಟ್ಯಾಂಕರ್ ಬಳಸಿಕೊಳ್ಳಲು ತಿಳಿಸಲಾಗಿದೆ. ಬರ ನಿರ್ವಹಣೆಗೆ ಅನುದಾನ ಕೊರತೆಯಿಲ್ಲ. ಅಧಿಕಾರಿಗಳು ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಬೇಜವಾಬ್ದಾರಿ ಹಾಗೂ ನಿಧಾನಗತಿ ಸಹಿಸಲಾಗದು ಎಂದು ಸಚಿವ ಎಚ್.ಕೆ.ಪಾಟೀಲ ಎಚ್ಚರಿಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮಾತನಾಡಿ ನೀರಿನ ಸಮಸ್ಯೆಯಿರುವ ಜಿಲ್ಲೆಯ 14 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಗದಗ ಬೆಟಗೇರಿ ನಗರಸಭೆಯ 35 ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಗದಗ ತಾಲೂಕಿನಲ್ಲಿ 13 , ಮುಂಡರಗಿ ತಾಲೂಕಿನಲ್ಲಿ 8 ನರಗುಂದ ತಾಲೂಕಿನಲ್ಲಿ 2, ಶಿರಹಟ್ಟಿ ತಾಲೂಕಿನಲ್ಲಿ 4 ಖಾಸಗಿ ಬೋರ್ವೆಲ್‍ಗಳ ಮುಖಾಂತರ ನೀರಿನ ಸಮಸ್ಯೆಯಿರುವ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಸಭೆಗೆ ವಿವರಿಸಿದರು. ಗುಡುಗು, ಸಿಡಿಲು, ಮಳೆ ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಾಟ್ಸ್‍ಅಪ್ ಗ್ರೂಪ್‍ಗಳಿಗೆ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಜಿಲ್ಲೆಯ 7 ಕಡೆಗಳಲ್ಲಿ ಮೇವು ಬ್ಯಾಂಕ್‍ಗಳನ್ನು ತೆರೆಯಲಾಗಿದ್ದು ಜಾನುವಾರುಗಳಿಗೆ 210512 ಟನ್‍ನಷ್ಟು ಮೇವು ಲಭ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಅವರು ಮಾತನಾಡಿ ಬರ ಪರಿಹಾರ ವಿತರಣೆ ಮಾಡುವಾಗ ಪ್ರತಿಯೊಬ್ಬ ರೈತರ ಹೊಲದಲ್ಲಿಯೂ ಕ್ರಾಪ್ ಸರ್ವೇ ( ಬೆಳೆ ಸಮೀಕ್ಷೆ ) ಲಿಂಕ್ ಮಾಡಲಾಗಿದೆ. 5591 ಫಲಾನುಭವಿಗಳ ಆಧಾರ ಮತ್ತು ಬ್ಯಾಂಕ್ ಖಾತೆ, ಫ್ರೂಟ್ಸ್ ಐಡಿಗಳಲ್ಲಿ ಹೆಸರಿನ ವ್ಯತ್ಯಾಸ ಮತ್ತು ಇತರೆ ಕಾರಣದಿಂದಾಗಿ ಪರಿಹಾರ ಜಮೆ ಆಗದೇ ಇದ್ದು ಅವುಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. 2023 ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಗೆ ಒಟ್ಟಾರೆ 1,13,778 ಫಲಾನುಭವಿಗಳಿಗೆ 1 ರಿಂದ 9 ಹಂತದವರೆಗೆ 22 ಕೋಟಿ ಬೆಳೆ ಹಾನಿ ಪರಿಹಾರ ಧನ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ವಿತರಣೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.