ವಿದ್ಯಾಭ್ಯಾಸದಷ್ಟೆ ಸುಸಂಸ್ಕೃತ ಬದುಕು ಮುಖ್ಯ:ರಾಮಕೃಷ್ಣೇಗೌಡ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.21: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಸುಸಂಸ್ಕೃತ ಬದುಕನ್ನು ಕಟ್ಟಿಕೊಳ್ಳುವುದು ಅಷ್ಟೇ ಮುಖ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಆರ್.ಟಿ.ಓ ಮಲ್ಲಿಕಾರ್ಜುನ್ ಕಛೇರಿಯ ಆವರಣದಲ್ಲಿ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಧ್ಘಾಟಿಸಿ ಮಾತನಾಡಿದರು.
ಪೆÇೀಷಕರ ಸಹಕಾರ ವಿದ್ಯಾರ್ಥಿಗಳ ಪರಿಶ್ರಮದಿಂದ ಒಳ್ಳೆಯ ಅಂಕಗಳಿಸಿರುವ ನಿಮ್ಮನ್ನು ಗುರುತಿಸಿ ಬೆಳಕಿಗೆ ತರುವ ಕೆಲಸವನ್ನು ಮಾಡುತ್ತಿರುವ ಮಲ್ಲಿಕಾರ್ಜುನ್‍ರವರ ಮನೋಭಾವನೆ ಉತ್ತಮವಾದುದು. ಹಣವುಳ್ಳವರು ಜೋರಾಗಿ ಹುಟ್ಟುಹಬ್ಬ ಮಾಡಿಕೊಳ್ಳುತ್ತಾರೆ. ಆದರೆ ಮಲ್ಲಿಕಾರ್ಜುನ್ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿರುವುದು ಹಾಗೂ ಅವರಿಗೆ ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ ಮಾರ್ಗದರ್ಶನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಹಾಗೆಯೇ ತಾಲ್ಲೂಕಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಮುಂದಿನ ದಿನಗಳಲ್ಲಿ ಪೆÇ್ರೀತ್ಸಾಹ ನೀಡುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ತೆಂಡೇಕೆರೆಯ ಬಾಳೆಹೊನ್ನೂರು ಶಾಖಾಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಹುಟ್ಟುಹಬ್ಬವನ್ನು ಪ್ರತಿಭಾ ಪುರಸ್ಕಾರವನ್ನಾಗಿ ಮಾಡಿ ನೂರಾರು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ನೈತಿಕ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವ ಮಲ್ಲಿಕಾರ್ಜುನ್ ಸಮಾಜಮುಖಿ ಕೆಲಸ ಇತರರಿಗೆ ಮಾದರಿಯಾಗಿದೆ. ತಮ್ಮ ಜನ್ಮಭೂಮಿಯ ಋಣ ತೀರಿಸಲು ಉತ್ತಮ ಕೆಲಸ ಮಾಡುತ್ತಿದ್ದಾರೆ. ಫಲಬಿಟ್ಟ ಮಾವು, ತೆನೆ ಬಿಟ್ಟ ಭತ್ತ ಬಾಗುತ್ತದೆ ಹಾಗೆಯೇ ಮಲ್ಲಿಕಾರ್ಜುನ್ ಎಷ್ಟೇ ಎತ್ತರಕ್ಕೆ ಬೆಳೆದರೂ ಬೀಗದೇ ಎಲ್ಲರಿಗೂ ಬಾಗುತ್ತಿರುವುದು ಸಂಸ್ಕಾರವಂತರ ಲಕ್ಷಣವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದಬೇಕು ಎಂಬ ಗುಂಗಿನಲ್ಲಿ ವಿದ್ಯಾರ್ಥಿಗಳು ನಿರತರಾಗಬೇಕು ಆ ಮೂಲಕ ಸಾಧನೆ ಮಾಡುವಂತಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ಮಾತನಾಡಿ ಪ್ರತೀ ಕುಟುಂಬದಿಂದ ಸಮಾಜಸೇವಕರು ಹುಟ್ಟಬೇಕು ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ವಾಪಸ್ ಕೊಡಬೇಕು ಶ್ರಮ ಇಲ್ಲದೇ ಸಾಧಕರಾಗಲು ಸಾಧ್ಯವಿಲ್ಲ ಅಂಕಗಳಿಕೆ ಯಶಸ್ಸಿನ ಮೊದಲ ಮೆಟ್ಟಿಲು. ಕಲಿಕೆ ಹಂತದಲ್ಲಿ ನಮ್ಮನ್ನು ಪೆÇ್ರೀತ್ಸಾಹಿಸಿದವರನ್ನು ಕಡೆವರೆಗೂ ಸ್ಮರಿಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ಸಹಕಾರ ಕೊಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ತಾಲ್ಲೂಕಿನ ವಿವಿಧ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ 230 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಾಗಿನೆಲೆ ಮೈಸೂರು ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿಗಳು, ಬೇಬಿಮಠದ ಪೀಠಾದ್ಯಕ್ಷ.ಶ್ರೀ ಶಿವಬಸವಸ್ವಾಮೀಜಿಗಳು, ಕಾಪನಹಳ್ಳಿ ಗವಿಮಠದ ಪೀಠಾದ್ಯಕ್ಷ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ಕೆ.ಆರ್.ನಗರ ಕಾಗಿನೆಲೆ ಶಾಖಾಮಠದ ಅರುಣ್ ಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಮಾಡಿ ಮಾತನಾಡಿದ ಶಿಕ್ಷಣ ತಜ್ಞ ಶಂಕರ್‍ಬೆಳ್ಳೂರು ಇಂದಿನ ಸ್ಪರ್ದಾತ್ಮಕ ಯುಗದಲ್ಲಿ 99% ಅಂಕ ಗಳಿಸಿದರೂ ಏನೂ ಪ್ರಯೋಜನವಾಗುವುದಿಲ್ಲ. ಬದಲಾಗಿ ನಿಮ್ಮಲ್ಲಿನ ತಾಂತ್ರಿಕತೆ, ಕೌಶಲ್ಯ ಮುಂತಾದುವುಗಳಿಗೆ ಬೆಲೆಯಿದ್ದು ಅದನ್ನು ಪಡೆಯುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಮಲ್ಲಿಕಾರ್ಜುನ್ ಅಭಿಮಾನಿಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಕೇಕ್ ಕತ್ತರಿಸಿ ಶಾಲು ಹಾರ ಪೇಟಗಳನ್ನು ತೊಡಿಸಿ ಶುಭಕೋರಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮೈಸೂರು ವಲಯದ ಸಾರಿಗೆ ಆಯುಕ್ತ ಸಿ.ಟಿ.ಮೂರ್ತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಅಭಿಯಂತರ ಹೆಚ್.ಸಿ.ಧರ್ಮೇಂದ್ರ, ಕೆ.ಸುರೇಶ್, ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆಮಹೇಶ್ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು ಹಾಜರಿದ್ದರು.