ತುರ್ತು ಬರ ಪರಿಹಾರ ಕಾಮಗಾರಿಗಳಿಗೆ ಆಗ್ರಹಿಸಿ ಕೃಷಿ ಕಾರ್ಮಿಕರ ಪ್ರತಿಭಟನೆ
ಕಲಬುರಗಿ:ಮೇ.20: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ರಾಜ್ಯದ 223 ತಾಲ್ಲೂಕುಗಳಲ್ಲಿ ಬರವಿದ್ದು ಜನ-ಜಾನುವಾರುಗಳಿಗೆ ನೀರು, ಮೇವಿಗಾಗಿ ಹಾಹಾಕಾರ ಶುರುವಾಗಿದೆ. ಪತ್ರಿಕೆಗಳ ವರದಿಯ ಪ್ರಕಾರ 29 ಜಿಲ್ಲೆಗಳ 149 ತಾಲ್ಲೂಕುಗಳ 1,920 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೆರೆಗಳಲ್ಲ್ಲಿ ನೀರಿಲ್ಲ. ಜಿಲ್ಲಾಡಳಿತದಿಂದ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವರ್ಷವೂ ಕೂಡ ಸರಿಯಾದ ಬೆಳೆಯಾಗದೇ ರೈತರಿಗೆ ಮೇವು ಸಂಗ್ರಹಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಮೇವಿನ ಲಭ್ಯತೆಯ ಕೊರತೆಯ ಜೊತೆಗೆ ವಿಪರೀತ ಬೆಲೆಯಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ. ಮೇವಿನ ಅಭಾವಕ್ಕೆ ಹೋಲಿಸಿಕೊಂಡರೆ ಮೇವು ಬ್ಯಾಂಕುಗಳು ಅಗತ್ಯವಿರುವಷ್ಟಿಲ್ಲ. ಜೊತೆಗೆ ರೈತರಿಗೆ ಸರಿಯಾಗಿ ವಿತರಣೆಯಾಗುತ್ತಿಲ್ಲ. ಜಾನುವಾರುಗಳಿಗೆ ಪಶು ಆಹಾರ ನೀಡುವುದಕ್ಕೂ ಹಣಕಾಸಿನ ತೊಂದರೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬರವಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೆಲಸಗಳು ನಡೆಯುತ್ತಿಲ್ಲ. ಆದ್ದರಿಂದ ಕೃಷಿ ಕಾರ್ಮಿಕರು ಮತ್ತು ಕೃಷಿ ಚಟುವಟಿಕೆಗಳನ್ನು ನೆಚ್ಚಿಕೊಂಡಿರುವವರಿಗೆ ಉದ್ಯೋಗವಿಲ್ಲದೆ ಊರೂರು ಅಲೆಯುವ, ಗುಳೆ ಹೋಗುವ ಪ್ರಮೇಯ ಬಂದಿದೆ. ನರೆಗಾ ಯೋಜನೆಯಡಿ ಉದ್ಯೋಗ ಒದಗಿಸುವುದರಲ್ಲಿ ಮತ್ತು ಹಣ ಬಿಡುಗಡೆ ಮಾಡುವುದರಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಒಂದು ಕಡೆ, ನೀರು, ಮೇವಿನ ಸಮಸ್ಯೆಯಾದರೆ, ಇನ್ನೊಂದು ಕಡೆ ಕೊಳವೆ ಬಾವಿಗಳು ಬತ್ತಿಹೋಗಿರುವುದರಿಂದ ರೈತರು ತಮ್ಮ ತೋಟದ ಬೆಳೆಗಳನ್ನು ಕಾಪಾಡಿಕೊಳ್ಳುವುದರಲ್ಲಿ ಹೈರಾಣಾಗಿದ್ದಾರೆ. ಕೊಳವೆ ಬಾವಿ ಕೊರೆಯುವ ಏಜೆನ್ಸಿಗಳು ದುರಿತ ಸಮಯದ ಲಾಭ ಪಡೆದುಕೊಳ್ಳಲು ಕೊಳವೆ ಬಾವಿ ಕೊರೆಯುವ ದರಗಳನ್ನು ಎರಿಸಿ ಉರಿಯುವ ಗಾಯಕ್ಕೆ ಉಪ್ಪು ಸವರಿದ್ದಾರೆ. ಒಂದು ಕೊಳವೆ ಬಾವಿಗೆ ಹಲವು ಲಕ್ಷ ಖರ್ಚು ಮಾಡಬೇಕು ಮತ್ತು ನೀರು ಬರುತ್ತದೆಯೆಂಬ ಖಚಿತತೆಯೂ ಇಲ್ಲ. ಎಷ್ಟೋ ಕಡೆ ರೈತರು ಸಾವಿರಾರು ರೂ ಖರ್ಚು ಮಾಡಿ ಟ್ಯಾಂಕರ್‍ಗಳಿಂದ ತೋಟಕ್ಕೆ ನೀರು ಹಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ರೈತರು ಬೆಳೆಹಾನಿ, ಆದಾಯ ಕಡಿತ, ನಿರುದ್ಯೋಗ, ಒಟ್ಟಾರೆ ಬರಗಾಲದಲ್ಲಿರುವಾಗ ಮೈಕ್ರೊ ಫೈನಾನ್ಸ್‍ನವರು ಸಾಲ ವಸೂಲಾತಿಗೆ ನಿಂತಿರುವುದು ಅತ್ಯಂತ ಖಂಡನೀಯ ಎಂದು ಅವರು ಆಕ್ಷೇಪಿಸಿದರು.
ಆರ್ಥಿಕ ಸಂಕಷ್ಟದ ಸಮಯದಲ್ಲಿ ಮನೆ ನಡೆಸಿಕೊಂಡು ಹೋಗಲು ಮತ್ತು ಕೃಷಿ ಕೆಲಸಗಳಿಗಾಗಿ ಗ್ರಾಮೀಣ ಜನರು ಮುಖ್ಯವಾಗಿ ರೈತ ಮಹಿಳೆಯರು ವಿಶೇಷವಾಗಿ ಮೈಕ್ರೊ ಫೈನಾನ್ಸ್‍ನವರಿಂದ ಸಾಲ ತೆಗೆದುಕೊಳ್ಳುತ್ತಾರೆ. ಮೈಕ್ರೊ ಫೈನಾನ್ಸ್‍ನವರು ವಿಪರೀತ ಬಡ್ಡಿಯ ಜೊತೆ ಅಪಮಾನಕಾರಿ ರೀತಿಯಲ್ಲಿ ಸಾಲ ವಸೂಲಾತಿಗೆ ಇಳಿದಿರುವುದರಿಂದ ಅಪಮಾನ ತಾಳಲಾಗದ ರೈತರು, ಮುಖ್ಯವಾಗಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರ ಹಣದ ಬಿಡುಗಡೆ ವಿಷಯದಲ್ಲಿ ಪರಸ್ಪರ ದೋಷಾರೋಪ ಮಾಡಿಕೊಂಡು ಚುನಾವಣಾ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಅವರ ಮಧ್ಯೆ ರೈತರು ಸತ್ತು ಸುಣ್ಣವಾಗುತ್ತಿದ್ದಾರೆ. ಇದಂತೂ ಅಕ್ಷಮ್ಯ ಮತ್ತು ಅಮಾನವೀಯ. ಆದ್ದರಿಂದ ಬರದಿಂದ ಮುಖ್ಯವಾಗಿ ರೈತ ಸಮುದಾಯವನ್ನು ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.
ರೈತರ ಎಲ್ಲ ಬೆಳೆಗಳ ನಷ್ಟಕ್ಕೆ ಸಮರ್ಪಕವಾದ ಪರಿಹಾರವನ್ನು ನೀಡುವಂತೆ, ಎಲ್ಲ ಬ್ಯಾಂಕುಗಳಲ್ಲಿರುವ ರೈತರ ಸಾಲಗಳನ್ನು ಮನ್ನಾ ಮಾಡುವಂತೆ, ಸಮರೋಪಾದಿಯಲ್ಲಿ ಎಲ್ಲ ರೀತಿಯ ಬರ ಪರಿಹಾರದ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ, ನರೆಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ, ಮತ್ತು ಕೃಷಿ ಕಾರ್ಮಿಕರಿಗೆ ಉದ್ಯೋಗವನ್ನು ಖಚಿತಪಡಿಸುವಂತೆ ಅವರು ಆಗ್ರಹಿಸಿದರು.
ಕೊಳವೆ ಬಾವಿಯ ವೆಚ್ಚವನ್ನು ವಿಪರೀತವಾಗಿ ಏರಿಸಿರುವುದನ್ನು ತಡೆಯುವಂತೆ, ಅಪಮಾನವಾಗುವ ರೀತಿಯಲ್ಲಿ ಸಾಲ ವಸೂಲಿ ಮಾಡುವ ಮೈಕ್ರೊ ಫೈನಾನ್ಸ್ ಮೇಲೆ ಕ್ರಮಗಳನ್ನು ತೆಗೆದುಕೊಳ್ಳುವಂತೆ, ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಖರೀದಿ ಮಾಡಿದ ಬೆಳೆಯ ಹಣವನ್ನು ಕೂಡಲೇ ಪಾವತಿಸುವಂತೆ ಅವರು ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷ ಕಾ. ಬಿ. ಭಗವಾನರೆಡ್ಡಿ, ಜಿಲ್ಲಾಧ್ಯಕ್ಷ ಗಣಪತ್‍ರಾವ್ ಕೆ. ಮಾನೆ, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ್‍ಸಿಂಗ್, ಪ್ರಧಾನ ಕಾರ್ಯದರ್ಶಿ ಮಹೇಶ್ ಎಸ್.ಬಿ., ಸದಸ್ಯರಾದ ಹರೀಶ್ ಸಿಂಗಾಣಿ, ಭೀಮಾಶಂಕರ್ ಆಂದೋಲಾ, ಶಂಕರ್ ಜಾಧವ್, ಶಂಭುಲಿಂಗ್ ಸರಡಗಿ, ಮಲ್ಲಿಕಾರ್ಜುನ್ ಜಾನೆ, ಅಮೃತ್ ಚವ್ಹಾಣ್, ಸುನೀಲ್ ಗೌಳಿ, ಗುಂಡೇರಾವ್ ಪಾಟೀಲ್, ಶರಣಬಸಪ್ಪ ಬಾಬನಗೋಳ್ ಮುಂತಾದವರು ಪಾಲ್ಗೊಂಡಿದ್ದರು.