ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿತ: ಸಚಿವ ಮಧು ಬಂಗಾರಪ್ಪ ರಾಜೀನಾಮೆಗೆ ಆಗ್ರಹ
ಕಲಬುರಗಿ:ಮೇ.20: ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿತದ ಹಿನ್ನೆಲೆಯಲ್ಲಿ ಹಾಗೂ ಮಾತೃಭಾಷೆ ಕನ್ನಡ ಬಳಕೆಯಲ್ಲಿ ಕಳಪೆ ಮಟ್ಟವನ್ನು ಹೊಂದಿರುವ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಭಾರತೀಯ ಜನತಾ ಪಕ್ಷದ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಮಾಧ್ಯಮ ಪ್ಯಾನೆಲಿಸ್ಟ್ ಡಾ. ಸುಧಾ ಹಾಲಕಾಯಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ವರ್ಷ ಎಸ್‍ಎಸ್‍ಎಲ್‍ಸಿ ಫಲಿತಾಂಶವು ಗಣನೀಯವಾಗಿ ಕುಸಿತ ಕಂಡಿದೆ. ಕಳೆದ ವರ್ಷದ ಫಲಿತಾಂಶಕ್ಕಿಂತ ಶೇಕಡಾ 10ರಷ್ಟು ಕುಸಿತಗೊಂಡಿದ್ದು, ತೇರ್ಗಡೆ ಪ್ರಮಾಣ ಶೇಕಡಾ 73.8ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ 28 ಶಾಲೆಗಳಿಗೆ ಹೋಲಿಸಿದರೆ 78 ಶಾಲೆಗಳು ಶೂನ್ಯ ಫಲಿತಾಂಶವನ್ನು ದಾಖಲಿಸಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಬಾಲಕರಿಗಿಂತ ಒಂದು ಲಕ್ಷ ಬಾಲಕಿಯರು ಉತ್ತೀರ್ಣರಾಗಿದ್ದರೂ ಜಿಲ್ಲೆಯಲ್ಲಿನ ಸಾಧನೆಯು ಕಳೆದ ವರ್ಷ 28ನೇ ಸ್ಥಾನದಿಂದ ಈ ವರ್ಷ 34ನೇ ಸ್ಥಾನಕ್ಕೆ ಕುಸಿದಿದೆ. ಗ್ರೇಸ್ ಅಂಕಗಳನ್ನು ಶೇಕಡಾ 10ರಿಂದ ಶೇಕಡಾ 20ರಷ್ಟು ಹೆಚ್ಚಿಸಿದ್ದು, ಶೇಕಡಾ 35ರಿಂದ ಶೇಕಡಾ 25ಕ್ಕೆ ಉತ್ತೀರ್ಣ ಅಂಕಗಳನ್ನು ಕಡಿಮೆ ಮಾಡಿದ್ದರೂ ಈ ಮಟ್ಟದ ಫಲಿತಾಂಶ ದಾಖಲಾಗಿರುವುದು ಆಥಂಕ ಹುಟ್ಟಿಸಿದೆ. ಬದಲಾವಣೆಯ ಹೊರತಾಗಿಯೂ ಒಟ್ಟಾರೆ ಫಲಿತಾಂಶಗಳು ಗಮನಾರ್ಹವಾಗಿ ಕುಸಿತಿದೆ ಎಂದು ಅವರು ಆತಂಕ ಹೊರಹಾಕಿದರು.
ಪರೀಕ್ಷಾ ಟು ಇ ಚರ್ಚಾ ಕಾರ್ಯಕ್ರಮದ ರಾಜ್ಯ ಸಂಯೋಜಕರಾಗಿ ನಾವು ರಾಜ್ಯಾದ್ಯಂತ ಹತ್ತನೇ ಮತ್ತು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಉಪ ಕ್ರಮವನ್ನು ಕೈಗೊಂಡಿದ್ದೇವೆ. ಈ ಹಿಂದೆ ಉತ್ತಮ ಫಲಿತಾಂಶವನ್ನು ಕಂಡಿದ್ದೇವೆ. ಆದಾಗ್ಯೂ, ಈ ವರ್ಷ ಫಲಿತಾಂಶ ಅತ್ಯಂತ ಕಳವಳಕಾರಿಯಾಗಿದೆ ಎಂದು ಅವರು ತಿಳಿಸಿದರು.
ಮಾಧ್ಯಮಿಕ ಶಿಕ್ಷಣ ಹಾಗೂ ಗ್ರಂಥಾಲಯಗಳ ಸಚಿವ ಮಧು ಬಂಗಾರಪ್ಪ ಅವರು ಕನ್ನಡವನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ತಮ್ಮ ಕಳಪೆ ಪ್ರಾವಿಣ್ಯತೆಯನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಪುತ್ರರಾದ ಮಧು ಬಂಗಾರಪ್ಪ ಅವರ ಇಂತಹ ಹೇಳಿಕೆಯು ಕನ್ನಡ ಭಾಷೆಗೆ ಧಕ್ಕೆ ತರುವಂತಾಗಿದೆ. ಶಿಕ್ಷಣ ವ್ಯವಸ್ಥೆಯ ಉಸ್ತುವಾರಿಯನ್ನು ವಹಿಸಿಕೊಂಡವರು ಕರ್ನಾಟಕದ ಭಾಷೆ ಮತ್ತು ಸಂಸ್ಕøತಿಯನ್ನು ಹಾಳು ಮಾಡುವುದನ್ನು ಒಪ್ಪಿಕೊಳ್ಳುವುದು ಸರ್ವಥಾ ಅಸಾಧ್ಯ ಎಂದು ಅವರು ಹೇಳಿದರು.
ರಾಜ್ಯದ ಸಮಗ್ರತೆ ಮತ್ತು ಸಮೃದ್ಧಿಯನ್ನು ಕಾಪಾಡುವಲ್ಲಿ ಸೋತವರು ತಮ್ಮ ಸಚಿವಾಲಯಗಳಲ್ಲಿ ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗದವರು ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ. ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಬದ್ಧವಾಗಿರುವ ಮತ್ತು ನಮ್ಮ ಭಾಷೆ, ಪರಂಪರೆಯನ್ನು ಗೌರವಿಸುವ ನಾಯಕರನ್ನು ಈ ಹುದ್ದೆಗೆ ಕರ್ನಾಟಕ ಬಯಸುತ್ತಿದೆ. ನಾವು ನಮ್ಮ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡೋಣ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಶ್ರೇಷ್ಠತೆ ಮತ್ತು ಹೆಮ್ಮೆಯನ್ನು ಮರುಸ್ಥಾಪಿಸಲು ಕೆಲಸ ಮಾಡೋಣ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜುಗೌಡ ಎನ್., ರಾಜುಗೌಡ ನಾಗನಹಳ್ಳಿ, ಗಿರಿರಾಜ್ ಎಸ್. ಯಳಮೇಲಿ ಮುಂತಾದವರು ಉಪಸ್ಥಿತರಿದ್ದರು.