ಈಶಾನ್ಯ ಪದವೀಧರ ಚುನಾವಣೆ, ಅಂತಿಮ ಮತದಾರರಪಟ್ಟಿ ಪ್ರಕಟ: ಮತದಾನಕ್ಕೆ 1,56,623 ಮತದಾರರು ಅರ್ಹ
ಕಲಬುರಗಿ:ಮೇ.20:ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483 ಮಹಿಳೆಯರು, ಇತರೆ 19 ಸೇರಿ ಒಟ್ಟು 1,56,623 ಜನ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯನ್ನು https://www.rcgulbarga.gov.in ನಲ್ಲಿ ಪ್ರಕಟಿಸಿದ್ದು, ಮತದಾರರು ಇದನ್ನು ವೀಕ್ಷಿಸಬಹುದಾಗಿದೆ. ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಭಾಗವಾಗಿ 01-11-2023 ಅರ್ಹತಾ ದಿನವನ್ನಾಗಿ ಅಂತಿಮ ಮತದಾರರರ ಪಟ್ಟಿಯನ್ನು ಕಳೆದ ಡಿಸೆಂಬರ್ 30 ರಂದು ಪ್ರಕಟಗೊಳಿಸಲಾಗಿತ್ತು. ಆಗ 95,184 ಪುರುಷರು, 54,980 ಮಹಿಳೆಯರು ಹಾಗೂ ಇತರೆ 20 ಸೇರಿ ಒಟ್ಟಾರೆ 1,50,184 ಜನ ಮತದಾರರಿದ್ದರು.
ತದನಂತರ ಪರಿಷ್ಕರಣೆ ಮತ್ತು ಇತ್ತೀಚೆಗೆ ಮೇ 6ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಿದ ಪರಿಣಾಮ ಪುರುಷ 3,937, ಮಹಿಳೆಯರು 2,503 ಸೇರ್ಪಡೆ ಹಾಗೂ ಇತರೆ-1 ಕಡಿತದೊಂದಿಗೆ ಅಂತಿಮವಾಗಿ ಒಟ್ಟು 6,439 ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.