ಮುಂದುವರಿದ ಅನಿರ್ದಿಷ್ಟಾವದಿ ಅಹೋರಾತ್ರಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮೇ 21; ದಲಿತ ಸಮುದಾಯದವರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಎಂಪಿಎಂ ಕಾರ್ಖಾನೆಯವರು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿ, ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಚಂದನಕೆರೆಯ ದಲಿತ ಸಮುದಾಯದವರು ಸಾಗುವಳಿ ಜಮೀನಿನಲ್ಲಿಯೇ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಮೇ 20 ಕ್ಕೆ 8 ನೇ ದಿನಕ್ಕೆ ಕಾಲಿಟ್ಟಿದೆ.   ಸಮೀಪದ  ಚಂದನಕೆರೆ  ಗ್ರಾಮದ ಸರ್ವೇ ನಂ. 12/ಎ ಬ್ಲಾಕ್ ನಲ್ಲಿ ಸುಮಾರು 28 ಎಕರೆ ಭೂಮಿಯನ್ನು ಅರದೋಟ್ಲು ಗ್ರಾಮದ 14 ಜನರಿಗೆ 1960- 61ರಲ್ಲಿ  ದಲಿತರಿಗೆ  ಸಾಗುವಳಿ  ನೀಡಿದ್ದು,  ಇದರಲ್ಲಿ  ದಲಿತರು  ಹತ್ತಿ, ಹುರುಳಿ, ಮೆಕ್ಕೆಜೋಳ ಬೆಳೆಗಳನ್ನು ಬೆಳೆಯುತ್ತಿದ್ದರು ಎಂದು ಅಂದಿನ ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡಿ ದೃಡೀಕರಿಸಿದ್ದಾರೆ.ದಲಿತರು 1985-86  ರವರೆಗೆ  ಸಾಗುವಳಿ ಮಾಡುತ್ತಾ  ಬಂದಿದ್ದು, ಕೆಲ ವರ್ಷಗಳ ನಂತರ ಅನಕ್ಷರಸ್ತ ಹಾಗೂ ಅಸಹಾಯಕ ದಲಿತರನ್ನು ಹೆದರಿಸಿ ದೌರ್ಜನ್ಯದಿಂದ ಎಂಪಿಎಂ ನವರು ನೀಲಗಿರಿ ನೆಡುತೋಪು ಮಾಡಿ. ದಲಿತರು ಭೂಮಿಯ ಮೇಲೆ ಹೋಗದಂತೆ  ಮಾಡಿದ್ದಾರೆ. ಇದರ ವಿರುದ್ದ ಸರ್ಕಾರದ ಜೊತೆ ಹಲವಾರು ಬಾರಿ ಪತ್ರ ವ್ಯವಹಾರ ಮಾಡುತ್ತಲೇ ಬರುತ್ತಿದ್ದರೂ ಇದುವರೆಗೂ ಯಾವುದೇ ಪ್ರಯೋಜವಿಲ್ಲ.ದಿನನಿತ್ಯ ಕಚೇರಿಗೆ ಅಲೆದಾಡುವುದೆ ಜೀವನವಾಗಿದೇ. ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಜಂಟಿ  ಸರ್ವೇ ಕಾರ್ಯ ನಡೆಸಿ, ಸರ್ಕಾರದಿಂದ ದಲಿತರಿಗೆ ಮಂಜೂರಾದ ಭೂಮಿಯನ್ನು ಹಸ್ತಾಂತರಿಸುವರೆಗೂ ಅನಿರ್ದಿಷ್ಠಾವಧಿ ಆಹೋರಾತ್ರಿ ದರಣಿ ನಡೆಸುವುದಾಗಿ ಪ್ರತಿಭಟನಾ ನಿರತರು ತಿಳಿಸಿದರು.ಸರ್ಕಾರದಿಂದ  ನೀಲಿಗಿರಿ ಮರ ಬೆಳೆಯುವುದನ್ನು ನಿಷೇಧಿಸಿದ್ದರು ಈ ಭಾಗದಲ್ಲಿ ಎಂಪಿಎಂ ನಮ್ಮ ಜಮೀನನಲ್ಲಿ ನೀಲಗಿರಿಯನ್ನು ಬೆಳೆಯುತ್ತಿದ್ದು, ತಕ್ಷಣವೇ ಸರ್ಕಾರ ಎಚ್ಚೆತ್ತು ಇದನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.ಜಮೀನುಗಳಿಗೆ ಹಕ್ಕುಪತ್ರ ನೀಡಬೇಕು. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಂಘಟನೆಯ ಜಿಲ್ಲಾ ಸಂಚಾಲಕ ಟಿ.ಹೆಚ್.ಹಾಲೇಶಪ್ಪ, ಗ್ರಾಮಾಂತರ ಘಟಕದ ಸಂಚಾಲಕರಾದ ಟಿ.ಹನುಮಂತಪ್ಪ ಸೇರಿದಂತೆ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.