ಸರ್ಕಾರದ ಸಬ್ಸಿಡಿ ಹಣ ಸಾಲಕ್ಕೆ ಜಮಾ ಮಾಡದಂತೆ ಒತ್ತಾಯಿಸಿ ರೈತರ‌ ಪ್ರತಿಭಟನೆ

ದಾವಣಗೆರೆ.ಮೇ.೨೦: ಸಾಮಾಜಿಕ ನ್ಯಾಯದಡಿ ನೀಡುವ ಗೃಹಲಕ್ಷ್ಮಿ, ಅಂಗವಿಕಲರ ವೇತನ, ವಿಧವಾ, ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಯಾವುದೇ ಸಬ್ಸಿಡಿ ಹಣ ಸಾಲಕ್ಕೆ ಜಮಾ ಮಾಡದಂತೆ ಸರ್ಕಾರ ಸೂಚಿಸಿದ್ದರೂ ತಾಲೂಕಿನ ಆನಗೋಡು ಗ್ರಾಮದ ವಿಜಯಾ ಬ್ಯಾಂಕ್‌ನಲ್ಲಿ ಸಾಮಾಜಿಕ ಭದ್ರತೆ, ಸಬ್ಸಿಡಿ ಹಣ ಸಾಲಕ್ಕೆ ಹಣ‍ ಮಾಡಲಾಗಿದ್ದು, ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬ್ಯಾಂಕ್ ಗಳಿಂದ ಬಾದಿತರಾದ ಜನರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.ದಾವಣಗೆರೆ ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ,ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದ ನಾಗಮ್ಮ ರಮೇಶ ಎಂಬ ಮಹಿಳೆಗೆ ಅಂಗವಿಕಲರ ಕಲ್ಯಾಣ ಇಲಾಖೆಯಿಂದ 35 ಸಾವಿರ ಸಹಾಯಧನ, 65 ಸಾವಿರ ಸಾಲ ಸೇರಿದಂತೆ 1 ಲಕ್ಷ ರೂ. ಪಡೆದಿದ್ದರು. ಈಗಾಗಲೇ 50 ಸಾವಿರ ಸಾಲ ಮರು ಪಾವತಿಸಿದ್ದಾರೆ. ಉಳಿದ 15 ಸಾವಿರ ಹಣ ಕಾರಣಾಂತರದಿಂದ ಕಟ್ಟಲು ಆಗಿರಲಿಲ್ಲ. ಈಗ 15 ಸಾವಿರ ಹಣಕ್ಕೆ ಗೃಹಲಕ್ಷ್ಮಿ,, ಉದ್ಯೋಗ ಖಾತರಿ, ಅಂಗವಿಕಲರ ವೇತನ ಇತರೆ ಎಲ್ಲಾ ಬಗೆಯ ಸಬ್ಸಿಡಿ ಹಣವನ್ನು ಆನಗೋಡು ವಿಜಯಾ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಆನಗೋಡು ಗ್ರಾಮದ ವಿಜಯ ಬ್ಯಾಂಕ್ ವ್ಯವಸ್ಥಾಪಕ ಕಳೆದ 6 ತಿಂಗಳಿನಿಂದಲೂ ಗ್ರಾಹಕರು, ಸಾರ್ವಜನಿಕರೊಂದಿಗೆ ಉದ್ಧಟತನದ ವರ್ತನೆ ತೋರುತ್ತಿದ್ದಾರೆ. ಸಾಕಷ್ಟು ಸಲ ರೈತರು, ಗ್ರಾಮೀಣರು, ಬ್ಯಾಂಕ್‌ನ ಗ್ರಾಹಕರು ತಿಳಿ ಹೇಳಿದರೂ ಸಹ ಬ್ಯಾಂಕ್ ವ್ಯವಸ್ಥಾಪಕ ತಮ್ಮ ವರ್ತನೆ ತಿದ್ದಿಕೊಳ್ಳುತ್ತಿಲ್ಲ. ಮತ್ತಷ್ಟು ಉದ್ಧಟತನದ ವರ್ತನೆ ಮುಂದುವರಿಸಿದ್ದಲ್ಲದೇ, ಇದೀಗ ಬಡ ಮಹಿಳೆಯರಿಗೆ ಬಂದ ಹಣ, ಸಬ್ಸಿಡಿ ಹಣವನ್ನೂ ಸಾಲಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ದುಂಡಾವರ್ತನೆ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.