ತಿಡಗುಂದಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ವಿಜಯಪುರ,ಸೆ.23:ವಿಜಯಪುರ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆ, ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಶ್ರೀ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ತಿಡಗುಂದಿ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಭಾನುವಾರ ತಿಡಗುಂದಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿಬಿರವನ್ನು ಪರಮ ಪೂಜ್ಯ ಬೊಮ್ಮನಹಳ್ಳಿ ಶ್ರೀಗಳು ಉದ್ಘಾಟಿಸಿ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಂಡಿದ್ದು ಸ್ವಾಗತಾರ್ಹ. ರೆಡ್ ಕ್ರಾಸ್ ಪರಿಣಿತ ವೈದ್ಯರನ್ನು ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಿದ್ದು ಅತ್ಯಂತ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಸಹಾಯವಾಗುತ್ತದೆಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಾಗಠಾಣ ಮತಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಅವರು ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದು, ಸದಾ ಜನಪರ ಕಾರ್ಯ ನಿರ್ವಹಿಸುತ್ತಿದೆ. ತಿಡಗುಂದಿ ಸುತ್ತಮುತ್ತಲಿನ ಹನ್ನೆರಡು ಗ್ರಾಮಗಳ ಬಡಜನತೆಗೆ ಈ ಶಿಬಿರ ಅತ್ಯಂತ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಈ ಶಿಬಿರದ ಆಯೋಜಕರಾದ ಸ್ಥಳೀಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಸನಗೌಡ ಹರನಾಳ ಅವರ ಪ್ರಯತ್ನವನ್ನು ಎಲ್ಲರೂ ಕೊಂಡಾಡಿದರು.
ವೈದ್ಯರುಗಳಾದ ಆನಂದ ಝಳಕಿ, ಸೈಯದ್ ಹನ್ನನ್, ಆರ್.ಎಂ.ಕರಡಿ, ಸೌಮ್ಯ ಪಾಟೀಲ, ಪ್ರೀತಾ, ಸಂದೀಪ ನಾಯಕ, ವಿವೇಕ ನಿಡೋಣಿ, ಪೂಜಾ ನಿಡೋಣಿ, ಸನ್ಮಿತ್ರಾ ಐಹೊಳ್ಳಿ, ಆನಂದ ಪಾಟೀಲ, ರಶ್ಮಿ ಪಾಟೀಲ ಅವರು ತಿಡಗುಂದಿ ಹಾಗೂ ಸುತ್ತಮುತ್ತಲಿನ ಸುಮಾರು 516 ರೋಗಿಗಳ ಪರೀಕ್ಷೆ ಮಾಡಿದರು ಹಾಗೂ ಸ್ಥಳದಲ್ಲೇ ಅವರಿಗೆ ಅವಶ್ಯವಿದ್ದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಸುಮಾರು 100 ಕ್ಕೂ ಹೆಚ್ಚು ಜನರಿಗೆ ಕಂಪ್ಯೂಟರ್ ಮೂಲಕ ನೇತ್ರ ಪರೀಕ್ಷೆಯನ್ನು ಮಾಡಲಾಯಿತು. ಸುಮಾರು 16 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಈ ಶಿಬಿರದಲ್ಲಿ ಸುಮಾರು 47 ಜನ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಅಶ್ವಿನಿ ಆಸ್ಪತ್ರೆಯ ಸುನೀಲ್ ದೇವೂರ, ಲಗಳಿ, ಕಾಂಬಳೆ ಹಾಗೂ ಇನ್ನಿತರರು ಶಿಬಿರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಂಡರು.
ಸಭೆಯಲ್ಲಿ ಡಾ. ಎಲ್.ಎಚ್.ಬಿದರಿ, ರೆಡ್ ಕ್ರಾಸ್ ಸಂಸ್ಥೆಯ ಚೇರಮನ್ ಶರದ ರೊಡಗಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರಾಧಿಕಾರಿ ದತ್ತಾತ್ರೇಯ ಹೊಸಮಠ, ಆಡಳಿತ ಮಂಡಳಿಯ ಸದಸ್ಯರಾದ ಶಿವಾನಂದ ಹತ್ತರಕಿ, ಪ್ರಕಾಶ ಮಠ, ಸೋಮನಾಥ ಜೇವೂರ ಮತ್ತು ಕಾರ್ಯದರ್ಶಿ ಮುರನಾಳ, ಕುಮಾರಗೌಡ ಹರನಾಳ ಅವರು ಉಪಸ್ಥಿತರಿದ್ದರು.