ಗುರು ಕಾರುಣ್ಯದಿಂದ ಬದುಕು ಉಜ್ವಲ

ಸಂಜೆವಾಣಿ ವಾರ್ತೆ
ಅಜ್ಜಂಪುರ- ಮೇ.೨೦; ತಾಯಿ ತಂದೆ ಮತ್ತು ಶ್ರೀ ಗುರು ಜೀವನ ವಿಕಾಸದ ಬಹು ದೊಡ್ಡ ಶಕ್ತಿ. ಭೌತಿಕ ಬದುಕಿಗೆ ತಾಯ್ತಂದೆ ಕಾರಣರಾದರೆ ಆಧ್ಯಾತ್ಮ ಬದುಕಿಗೆ ಗುರು ಮೂಲ. ಗುರು ಕಾರುಣ್ಯದಿಂದ ಮನುಷ್ಯನ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ತಾಲೂಕಿನ ಗೊಂಡೇದಹಳ್ಳಿ ಸಾಮೂಹಿಕ ಸಭಾ ಭವನದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ 18ನೇ ವರ್ಷದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಭಗವಂತನ ಶಕ್ತಿ ಅದ್ಭುತ. ಆದರೆ ಕಣ್ಣಿಗೆ ಕಾಣುವುದಿಲ್ಲ. ಪರಶಿವನ ಸಾಕಾರ ರೂಪ ಶ್ರೀ ಗುರು. ಶಿವ ಮತ್ತು ಗುರುವಿನಲ್ಲಿ ಯಾವುದೇ ಭೇದವಿಲ್ಲ. ವೀರಶೈವ ಧರ್ಮದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಸಮರ್ಥ ಗುರುವಿನಿಂದ ಏನೆಲ್ಲ ಸೌಭಾಗ್ಯ ಸಂಪತ್ತು ಪ್ರಾಪ್ತಿಯಾಗುತ್ತದೆ. ಅಷ್ಟಾವರಣದಲ್ಲಿ ಗುರು ಮೊದಲಿಗನಾಗಿದ್ದು ಭವ ಬಂಧನದಿAದ ಭಕ್ತನನ್ನು ಮುಕ್ತಗೊಳಿಸುವ ಶಕ್ತಿಯಿದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಬದುಕಿನ ಅಜ್ಞಾನ ಕಳೆಯಲು ಗುರು ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೆöÊತ ಸಿದ್ಧಾಂತದಲ್ಲಿ ಶ್ರೀ ಗುರುವಿನ ಪಾತ್ರ ಅಮೋಘವಾಗಿದೆ. ಯುಗ ಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಮತ್ತು ತೋರಿದ ದಾರಿ ಸಕಲರಿಗೂ ಬೆಳಕನ್ನು ತೋರಿವೆ. ನೊಂದ ಬೆಂದವರ ಧ್ವನಿಯಾಗಿ ದೀನ ದಲಿತರ ಏಳಿಗೆಗೆ ಸದಾ ಶ್ರಮಿಸಿದ ಹಾಗೂ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರö್ಯ ತಂದು ಕೊಟ್ಟ ಹಿರಿಮೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಅಂಥ ಮಹಿಮಾನ್ವಿತರ ಯುಗಮಾನೋತ್ಸವ ಗೊಂಡೇದಹಳ್ಳಿ ಶ್ರೀ ಗುರು ರೇಣುಕ ಶಿವಾಚಾರ್ಯ ಜನ ಕಲ್ಯಾಣ ಪ್ರತಿಷ್ಠಾನ(ರಿ) ಆಶ್ರಯದಲ್ಲಿ ಜರುಗುತ್ತಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು.