ತಾಯಂದಿರು ಕುಟುಂಬದ ಭಾವನಾತ್ಮಕ ಬೆನ್ನೆಲುಬು: ಸುರೇಶ ಜತ್ತಿ
ವಿಜಯಪುರ,ಮೇ.20:ಪÀ್ರತಿಯೊಬ್ಬರ ಜೀವನದಲ್ಲಿ ತಾಯಿ ಅತ್ಯಂತ ಪ್ರಮುಖ ಮಹಿಳೆ. ತಾಯಿ ತನ್ನ ಸಂತೋಷವನ್ನು ತನ್ನ ಮಗುವಿಗೆ ತ್ಯಾಗ ಮಾಡುತ್ತಾಳೆ. ತಾಯಿ ಮಾಡುವ ರೀತಿಯಲ್ಲಿ ಬೇರೆ ಯಾರೂ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ತಾಯಿಯು ಸದಾ ಶ್ರೇಷ್ಠಳು ಎಂದು ಸುರೇಶ ಜತ್ತಿ ಹೇಳಿದರು.
ನಗರದ ರೇಡಿಯೋ ಕೇಂದ್ರದ ಎದುರಿಗಿರುವ ಶಿವನೇರಿ ಬಿಜಿ ಶಾಲೆಯಲ್ಲಿ ಬುಧವಾರ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಹಾಗೂ ಆರ್.ಬಿ.ಎ ನವೋದಯ ಕೋಚಿಂಗ್ ಸೆಂಟರ್ ಅವರ ಸಂಯುಕ್ತಾಶ್ರಯದಲ್ಲಿ ಅಮ್ಮನಿಗೊಂದು ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಅಮ್ಮನ ಪ್ರೀತಿ, ತ್ಯಾಗ, ವಾತ್ಸಲ್ಯಕ್ಕೆ ಸರಿಸಾಟಿ ಇಲ್ಲ. ಅವಳ ನಿಷ್ಕಲ್ಮಶ ಪ್ರೀತಿಗೆ ನಾವು ಚಿರಋಣಿ.ತಾಯಿಯ ಪ್ರೀತಿಯು ತಾಯಿ ಮತ್ತು ಮಗುವಿನ ನಡುವಿನ ಅನನ್ಯ ಮತ್ತು ಮುರಿಯಲಾಗದ ಬಂಧವಾಗಿದೆ ಎಂದು ಹೇಳಿದರು.
ಸಾಹಿತಿ ಆರ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ತಾಯಿ ಕಲಿಸಿದ ನೈತಿಕ ಮೌಲ್ಯಗಳು ಬಹುಮುಖ್ಯ. ವ್ಯಕ್ತಿಗಳು ತಮ್ಮ ತಾಯಿಯ ಮೌಲ್ಯಗಳನ್ನು ವೃದ್ಧಾಪ್ಯದವರೆಗೂ ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಸಮಾಜದ ಸ್ವಾಸ್ಥ್ಯಕ್ಕೆ ತಾಯಿ ಹೊಣೆ. ಸಮಾಜದ ಭವಿಷ್ಯವು ದೊಡ್ಡ ರೀತಿಯಲ್ಲಿ ತಾಯಿಯ ಬೋಧನೆಯ ಫಲಿತಾಂಶವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ತಾಯಿಯು ದೇವರ ಅಮೂಲ್ಯ ಉಡುಗೊರೆ. ಪ್ರತಿಯೊಬ್ಬರ ಜೀವನದಲ್ಲಿ ತಾಯಿ ರತ್ನ. ಅವಳು ಮಗುವಿಗೆ ಸಂತೋಷದ ಅಂತಿಮ ಮೂಲವಾಗಿದೆ. ಅವಳ ಪ್ರೀತಿ ಶುದ್ಧ ಮತ್ತು ಮುಗ್ಧ. ಪ್ರೀತಿಸದ ತಾಯಿಯನ್ನು ಹುಡುಕುವುದು ಬಹುಶಃ ಅಸಾಧ್ಯವಾದ ಕೆಲಸ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೇವಣಸಿದ್ದ ವಾಲೀಕಾರ ಮಾತನಾಡಿ, ತಾಯಂದಿರು ಕುಟುಂಬದ ಭಾವನಾತ್ಮಕ ಬೆನ್ನೆಲುಬು. ಅವರು ಕುಟುಂಬದಲ್ಲಿ ಪ್ರತಿಯೊಬ್ಬರ ಭಾವನೆಗಳನ್ನು ಬೆಂಬಲಿಸುತ್ತಾರೆ. ಕುಟುಂಬದ ಸದಸ್ಯರು ಆತಂಕವಿಲ್ಲದೆ ತಾಯಂದಿರಿಗೆ ತಮ್ಮ ಭಾವನೆಗಳನ್ನು ಖಂಡಿತವಾಗಿ ಹೇಳಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಸಂತೋಷ ಹೆಗಡೆ, ಮಲ್ಲಿಕಾರ್ಜುನ ಮಿರಗಿ, ಪಿ.ಬಿ. ಖೇಡಗಿ, ಅನ್ನಪೂರ್ಣ ಶಿರಗಟ್ಟಿ, ಕುಮಾರಿ ದೀಪಾ ಸುಲ್ತಾನಪೂರ, ಪರಶುರಾಮ ಅಪ್ಪನಗೋಳ ಉಪಸ್ಥಿತರಿದ್ದರು.
ಕುಮಾರಿ ಯಲ್ಲಮ್ಮ ಹಳ್ಳಿ ಸ್ವಾಗತಿಸಿದರು. ಕುಮಾರಿ ಸಂಜನಾ ಸಿಂದಗಿ ನಿರೂಪಿಸಿದರು. ಕುಮಾರ ಓಂಕಾರ ವಂದಿಸಿದರು.