ಕೇಂದ್ರಿಯ ವಿವಿ ಸಂಶೋಧನಾ ವಿದ್ಯಾರ್ಥಿ ಲಕ್ಕೂರು ಸಿ.ಆನಂದ ಅನುಮಾನಾಸ್ಪದ ಸಾವು
ಕಲಬುರಗಿ,ಮೇ.20-ಜಿಲ್ಲೆಯ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ.
ಮೃತನನ್ನು ಯುವ ಕವಿ, ಸಾಹಿತಿ ಲಕ್ಕೂರು ಸಿ ಆನಂದ (42) ಎಂದು ಗುರುತಿಸಲಾಗಿದೆ.
ವಿಶ್ವವಿದ್ಯಾಲಯದ ಪೆಟ್ರೋಲ್ ಪಂಪ್ ಬಳಿ ಅವರ ಶವ ಪತ್ತೆಯಾಗಿದ್ದು, ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅವರು ಕನ್ನಡ ವಿಷಯದಲ್ಲಿ ಪಿಹೆಚ್‍ಡಿ ಮಾಡುತ್ತಿದ್ದರು ತಿಳಿದುಬಂದಿದೆ. ಸುದ್ದಿ ತಿಳಿದು ನರೋಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರಾದ ಆನಂದ ದಲಿತ- ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರು.
ಕವಿ, ವಿಮರ್ಶಕ, ಅನುವಾದಕರಾಗಿಯೂ ಗುರುತಿಸಿಕೊಂಡಿರುವ ಆನಂದ ಅವರ ಮಾತೃಭಾಷೆ ತೆಲುಗು. ಪ್ರಸ್ತುತ ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಲಕ್ಕೂರು ಆನಂದ ಅವರು ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ. ಮಾತಂಗ ಮಾದಿಗರ ಸಂಸ್ಕøತಿಯ ಬಗ್ಗೆ ಆನಂದ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ.
ಇತ್ತೀಚೆಗೆ ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ರಾಣಿ ಶಿವ ಶಂಕರ ಶರ್ಮರ ‘ಕೊನೆಯ ಬ್ರಾಹ್ಮಣ’ ಕೃತಿ ಇದೀಗ ಅಭಿನವ ಪ್ರಕಾಶನದಿಂದ ಕನ್ನಡದಲ್ಲಿ ಪ್ರಕಟವಾಗಿದೆ. ಲಕ್ಕೂರು ಆನಂದ ಅವರೇ ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಆಂಧ್ರದ ಶ್ರೀ ಶ್ರೀ ಕಾವ್ಯ, ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ, ದು ನಿಂ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಆನಂದರಿಗೆ ಸಂದಿದೆ. ತಮಗೆ ಬಂದ ಪ್ರಶಸ್ತಿಗಳನ್ನು ಅವರು, ‘ರಾಜ್ಯದ ಎಲ್ಲಾ ದಮನಿತ ಸಮುದಾಯಗಳಿಗೆ’ ಅರ್ಪಿಸಿದ್ದಾರೆ.
ಊರಿಂದ ಊರಿಗೆ, ಇಪ್ಪತ್ತರ ಕಲ್ಲಿನ ಮೇಲೆ, ಬಟವಾಡೆಯಾಗದ ರಸೀತಿ, ಇತಿ ನಿನ್ನ ವಿಧೇಯನು, ಉರಿವ ಏಕಾಂತ ದೀಪ ಇವರ ಕವನ ಸಂಕಲನಗಳು. ಸ್ಮೃತಿ ಕಿಣಾನ್ತಂ, ಕೊನೆ ಬ್ರಾಹ್ಮಣ, ಆಕಾಶ ದೇವರ, ನಗ್ನ ಮುನಿಯ ಸಮಗ್ರ ಕಥೆಗಳು, ಅರುದ್ರ ಇವರ ಅನುವಾದಿತ ಕೃತಿಗಳಾಗಿವೆ.