ಕಚೇರಿಗೆ ಅಲೆದಾಡಿಸದೆ ಕೆಲಸ ಮಾಡಿಕೊಡಿ
ಔರಾದ್ :ಮೇ.20: ಸರಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಲೋಕಾಯುಕ್ತ ಪೆÇಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಸಾಮಥ್ರ್ಯ ಸೌಧದಲ್ಲಿ ಶನಿವಾರ ಲೋಕಾಯುಕ್ತ ಕಚೇರಿ ಬೀದರ ಸಹಯೋಗದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆಗಳು ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವೆಲ್ಲಾ ಜನರ ಸೇವೆಗಾಗಿ ಇರುವುದು. ಹೀಗಾಗಿ ಜನರ ಕೆಲಸಗಳನ್ನು ಶಿಸ್ತುಬದ್ಧವಾಗಿ ಮಾಡಬೇಕು ಎಂದು ಹೇಳಿದರು.
ಸರ್ಕಾರ ಬಡ ಜನರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶಕ್ಕಾಗಿ ಇಲಾಖೆಗಳನ್ನು ರಚಿಸಿದೆ. ಈ ಇಲಾಖೆಗಳಲ್ಲಿನ ಅಧಿಕಾರಿಗಳು ಜನರ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ ಕಾರ್ಯನಿರ್ವಹಿಸಬೇಕು. ಬಡ ಜನರನ್ನು ಹೆಚ್ಚು ಸಮಯ ಕಾಯಿಸದೆ ಕಾನೂನು ಬದ್ಧವಾಗಿ ಅವರ ಕೆಲಸ ಮಾಡಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಾವುಗಳು ನಮ್ಮ ಮನೆಯಲ್ಲಿನ ಶೌಚಾಲಯ ಸ್ವಚ್ಛವಾಗಿ ಇಟ್ಟಿಕೊಳ್ಳುತ್ತೇವೆ. ಆದರೆ ಕಚೇರಿಯ ಶೌಚಾಲಯ ಯಾಕೆ ಸ್ವಚ್ಛವಾಗಿ ಇಟ್ಟಿಕೊಳ್ಳುವದಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಅವರು ಸ್ವಚ್ಛತೆಗಾಗಿ ಇರುವ ನೌಕರರಿಂದ ಸ್ವಚ್ಛತೆ ಮಾಡಿಸಬೇಕು ಎಂದು ತಾಕೀತು ಮಾಡಿದರು. ಲೋಕಾಯುಕ್ತರಿಗೆ ದೂರು ಬಂದರೆ ಯಾವುದೇ ಕಾರಣಕ್ಕೂ ಸುಮ್ಮನೆ ಕುಡುವದಿಲ್ಲ. ಯಾರೇ ಇರಲಿ ಅವರ ಮೇಲೆ ದೂರು ದಾಖಲು ಮಾಡಿಕೊಳ್ಳುತ್ತೇವೆ ಎಂದರು. ಕೊಲೆ ಮಾಡಿದರೇ ಬೇಗ ಜಾಮೀನು ಸಿಗಬಹುದು ಆದರೆ ಭ್ರಷ್ಟಚಾರ ಪ್ರಕರಣದಲ್ಲಿ ಶ್ರೀಘವಾಗಿ ಜಾಮೀನು ದೊರೆಯುವದಿಲ್ಲ. ಆದ್ದರಿಂದ ಅಧಿಕಾರಿಗಳು ತಮ್ಮ ಅಧಿಕಾರವಧಿಯಲ್ಲಿ ಕಪ್ಪು ಚುಕ್ಕೆ ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಯೋಧರು ತಮ್ಮ ಜೀವ ಲೆಕ್ಕಿಸದೇ ದೇಶಕ್ಕಾಗಿ ಪ್ರಾಣವನ್ನೇ ನೀಡುತ್ತಾರೆ. ದೇಶದ ಜನರಿಗಾಗಿ ಜೀವ ಪಣಕ್ಕಿಟ್ಟು ಹೋರಾಡುತ್ತಾರೆ. ಯೋಧರಿಗೆ ಹೋಲಿಸಿದರೇ ನಾವುಗಳು ಅವರ ಶೇ. 10ರಷ್ಟು ಕೆಲಸ ಮಾಡುವದಿಲ್ಲ. ಲಂಚ ಪಡೆಯುವದು ಅಪರಾಧ. ಅದರಂತೆ ಸಕಾಲಕ್ಕೆ ಕೆಲಸ ಮಾಡದಿರುವುದು ಕೂಡಾ ಅಪರಾಧವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ನಾಗಯ್ಯ ಹಿರೇಮಠ, ತಾಪಂ ಇಒ ವೆಂಕಟ ಶಿಂಧೆ, ಲೋಕೋಪಯೋಗಿ ಎಇಇ ವೀರಶೆಟ್ಟಿ ರಾಠೋಡ್ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡರು.
ಇಲಾಖೆಯಲ್ಲಿ ವಿನಾಕಾರಣ ಸಾರ್ವಜನಿಕರಿಗೆ ಸುತ್ತಾಡಿಸಬೇಡಿ
ಎಸ್ಪಿ ಔರಾದನಲ್ಲಿ ಸೇವೆ ಸಲ್ಲಿಸಿದ್ದಾರೆ
ಕಲಬುರಗಿಯ ಲೋಕಾಯುಕ್ತ ಎಸ್ಪಿ ಆಂತೋನಿ ಜಾನ್ ಅವರು ಔರಾದ್ ತಾಲೂಕಿನಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ ಎಂದು ಲೋಕಾಯುಕ್ತ ಪೆÇಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ ಸ್ಮರಿಸಿದರು. ತಿಂಗಳಲ್ಲಿ ಔರಾದಗೆ ಭೇಟಿ ನೀಡಲಿದ್ದಾರೆ. ಎಲ್ಲ ಕಚೇರಿಗಳಲ್ಲಿ ಸ್ವಚ್ಛತೆಗೆ ಮಹತ್ವ ನೀಡಬೇಕು. ಅಲ್ಲದೇ ಇಲಾಖೆಯಲ್ಲಿ ವಿನಾಕಾರಣ ಸಾರ್ವಜನಿಕರಿಗೆ ಸುತ್ತಾಡಿಸಬೇಡಿ ಎಂದು ಕೊಳ್ಳಾ ಅಧಿಕಾರಿಗಳಿಗೆ ಸೂಚಿಸಿದರು.