ಜೀವನ ಗಾಳಿಯಲ್ಲಿಟ್ಟ ದೀಪದಂತೆ : ಯಾವಾಗ ಶಾಂತವಾಗುತ್ತದೆ ಗೊತ್ತಿಲ್ಲ ನಗುನಗುತ ಬಾಳಿ: ನಿರಂಜನ ದೇವರು
ಕಲಬುರಗಿ:ಮೇ.20:ಮಾನವನ ಜೀವನ ಗಾಳಿಯಲ್ಲಿಟ್ಟ ದೀಪದಂತೆ ಯಾವಾಗ ಶಾಂತವಾಗುತ್ತದೆ ಗೊತ್ತಿಲ್ಲ ತಾವು ಸದಾಕಾಲ ಪಶು ಪಕ್ಷಿಗಳಂತೆ ನಗುನಗುತ ಜೀವನ ಸಾಗಿಸಿ ಎಂದು ಪರಮ ಪೂಜ್ಯ ಶ್ರೀ ನಿರಂಜನ ದೇವರು ಹೇಳಿದರು.
ಅವರು ಕಲಬುರ್ಗಿಯ ಮಾಕಾ ಲೇಔಟ್ ಎನ್‍ಜಿಓ ಬಡಾವಣೆ ಜೇವರ್ಗಿ ಕಾಲೋನಿ ಕಲಬುರಗಿ ಯಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ವತಿಯಿಂದ 891ನೆಯ ಬಸವ ಜಯಂತಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ 10ನೇ ದಿವಸದ ಪ್ರವಚನ ಕಾರ್ಯಕ್ರಮ ಹಾಗೂ ಹಿಮಾಲಯನ್ ಧ್ಯಾನ,ಯೋಗ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಾ ಮಾತನಾಡುತ್ತಾ ಸಮಾಜಕ್ಕಾಗಿ ಬದುಕಿದವರನ್ನು ಸಮಾಜ ಸ್ಮರಿಸುತ್ತದೆ, ಮನುಷ್ಯ ಸದಾ ಕಾಲ ಉಪಜೀವನ ಕಾಯಕ,ಆನಂದ ಕಾಯಕ , ಧರ್ಮ ಕಾಯಕ ಮಾಡುತ್ತಾ ಇದ್ದರೆ ಆನಂದವಾಗಿ ಬದುಕುತ್ತಾರೆ, ನಾವು ಎಷ್ಟು ವರ್ಷ ಬದುಕುತ್ತೇವೆ ಅನ್ನುವುದು ಮುಖ್ಯವಲ್ಲ, ಹೇಗೆ ಬದುಕಿದ್ದೆ ಎನ್ನುವುದು ಬಹಳ ಮುಖ್ಯ, ಅಣ್ಣ ಬಸವಣ್ಣನವರು ಜೀವನವನ್ನು ಬಹಳ ಸರಳಗೊಳಿಸಿದರು ಅವರ ಕಾಯಕ ನಿಷ್ಠೆ ನಮಗೆ ಮಾದರಿ, ಜೀವನ ಏಳು ಅಂಕದ ನಾಟಕ ಇದ್ದಂತೆ ಮೊದಲನೆಯ ಅಂಕ ತೊಟ್ಟಿಲಲ್ಲಿ ಬೆಳೆಯುವುದು, ಎರಡನೆಯ ಅಂಕ ಶಿಕ್ಷಣ ಮುಗಿಸುವುದು, ಮೂರನೆಯ ಅಂಕ ನೌಕರಿ ದುಡಿತ ಕಾಯಕ ಮಾಡುವುದು, ನಾಲ್ಕನೆಯ ಅಂಕ ಮದುವೆ, ಐದನೆಯ ಅಂಕ ಮಕ್ಕಳು ಮರಿ, ಆರನೆಯ ಅಂಕ ಮುಪ್ಪು ಆವರಿಸುವುದು, ಏಳನೆಯ ಅಂಕ ಮರಣ ಈ ಜೀವನವೆಂಬ ನಾಟಕದಲ್ಲಿ ನಮಗೆ ಕೊಟ್ಟಿರುವ ಪಾತ್ರವನ್ನು ನಗುನಗುತ್ತಾ ನಟಿಸುವುದು ನಮ್ಮ ಕರ್ತವ್ಯವಾಗಬೇಕು ನಗು ನಮ್ಮ ಬದುಕನ್ನು ಸ್ವಚ್ಛಂದವಾಗಿ ಮಾಡುತ್ತದೆ ನಗುವಿಲ್ಲದಿದ್ದರೆ ಜೀವನ ವ್ಯರ್ಥ, ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು, ಹಾಗೆ ಮಾಡಿದರೆ ಹುಚ್ಚರಾಗುತ್ತಿರಿ ಆದ್ದರಿಂದಲೇ ಶರಣರು ಪಶು ಪಕ್ಷಿಗಳಂತೆ ನಗು ನಗುತ ಬಾಳಿ ಎಂದು ತಿಳಿಸಿದರು, ಮಲಗುವಾಗ ಏಳುವಾಗ ನಗುತ್ತಾ ಹಾಡುತ್ತಾ ಬದುಕೋಣ ಎಂದು ಮಾರ್ಮಿಕವಾಗಿ ನುಡಿದರು, ಸಾವಿರಾರು ಬಸವ ಅಭಿಮಾನಿಗಳು ಅವರ ಮಾತುಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ತಮ್ಮ ಜೀವನದಲ್ಲೂ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂಬ ವಿಚಾರ ಅಲ್ಲಿ ಕಂಡು ಬಂತು. ಮಾಕಾ ಲೇಔಟ್ ಎನ್‍ಜಿಒ ಕಾಲೋನಿ, ಜೇವರ್ಗಿ ಕಾಲೋನಿ ಹಾಗೂ ಸುತ್ತಮುತ್ತಲಿನ ಕಾಲೋನಿಯ ಅನೇಕ ಭಕ್ತರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಆಯೋಜಕರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದ್ದರು ನಂತರ ಬಂದ ಭಕ್ತರಿಗೆ ಪ್ರಸಾದ ವಿತರಣೆ ಜರುಗಿತು. ಮೊದಲಿಗೆ ಆಕಾಶವಾಣಿ ಕಲಾವಿದರಾದ ಸೂರ್ಯಕಾಂತ್ ಡುಮ್ಮಾ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಬಾಬುರಾವ್ ಕೋಬಾಳ, ಅಂಬರೀಶ್ ಹೂಗಾರ್ ದೇಸಾಯಿ ಕಲ್ಲೂರ್, ವಚನ ಸಂಗೀತ ಸೇವೆ ನಡೆಸಿಕೊಟ್ಟರು.