ಗಣಪತಿ ಆಶ್ರಮದಲ್ಲಿ ಸತ್ಯನಾರಾಯಣ ವ್ರತ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.20:- ನಗರದ ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಾನುವಾರ ಸಾಮೂಹಿಕ ಸತ್ಯನಾರಾಯಣ ವ್ರತ ಸಾಂಗವಾಗಿ ನೆರವೇರಿತು. ಮೈಸೂರು ಸೇರಿದಂತೆ ರಾಜ್ಯ, ಹೊರ ರಾಜ್ಯಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ದಂಪತಿ ಸತ್ಯನಾರಾಯಣ ವ್ರತದಲ್ಲಿ ಪಾಲ್ಗೊಂಡಿದ್ದರು.
ಗಣಪತಿ ಹೋಮದ ನಂತರ ಸತ್ಯನಾರಾಯಣ ವ್ರತವನ್ನು ಪ್ರಾರಂಭಿಸಲಾಯಿತು. ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಜ್ಯೋತಿ ಬೆಳಗಿಸಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು. ಸಂತೋಷ್ ಘನಪಾಟಿ ಮತ್ತು ಶಿಷ್ಯರ ನೇತೃತ್ವದಲ್ಲಿ ವ್ರತ ನೆರವೇರಿತು.
ಅವಧೂತ ದತ್ತಪೀಠದ ವತಿಯಿಂದಲೇ ಉಚಿತವಾಗಿ ಸತ್ಯನಾರಾಯಣ ವ್ರತ ಏರ್ಪಡಿಸಿದ್ದಲ್ಲದೆ ಈ ವ್ರತಕ್ಕೆ ಬೇಕಾದಂತಹ ಸಕಲ ಪೂಜಾ ಸಾಮಗ್ರಿಗಳು ಮತ್ತು ಪ್ರಸಾದವನ್ನು ಕೂಡಾ ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಸತ್ಯನಾರಾಯಣ ವ್ರತ ಮಾಡುವುದರಿಂದ ಮನುಷ್ಯರ ದುಃಖ, ಕಷ್ಟ ಕೋಟಲೆ ದೂರವಾಗಲಿದೆ. ಸಂಸಾರದಲ್ಲಿ ಸುಖ, ದುಃಖ ಎರಡೂ ಇರಬೇಕು, ಸದಾ ಸತ್ಯವನ್ನೆ ನುಡಿಯಬೇಕು. ಸಾಧ್ಯವಾದಷ್ಟೂ ಒಳಿತನ್ನೇ ಮಾಡಬೇಕು ಎಂದು ಹೇಳಿದರು.
ಪ್ರಪಂಚದಲ್ಲಿ ನಮ್ಮ ಆಶ್ರಮಗಳು ಬಹಳಷ್ಟು ಇವೆ. ಆದರೆ ನಮಗೆ ನಮ್ಮ ಮೈಸೂರಿನ ಕಾವೇರಿ ನದಿ ಬಿಟ್ಟು ಹೋಗಲು ಮನಸ್ಸಿಲ್ಲ. ಆದರೆ ಕೆಲವರು ಕಾವೇರಿ ನದಿಯಲ್ಲಿ ನೀರೆ ಇಲ್ಲ ಎನ್ನುತ್ತಾರೆ. ಈಗ ಮತ್ತಮ ಮಳೆಯಾಗುತ್ತಿದ್ದು, ಕಷ್ಟಗಳು ದೂರವಾಗಲಿವೆ ಎಂದು ಸ್ವಾಮೀಜಿ ತಿಳಿಸಿದರು.
ಪ್ರತಿ ವರ್ಷ ಈ ರೀತಿಯ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಬೇಕೆಂಬುದು ನಮ್ಮ ಮಹಾದಾಸೆ. ಆಶ್ರಮದಲ್ಲಿ ಪ್ರತಿದಿನ ಸಂಜೆ ಸತ್ಸಂಗ ನಡೆಯಬೇಕು ಎಂಬ ಆಶಯವಿದೆ. ಇದೆಲ್ಲದರಲ್ಲೂ ಭಕ್ತರು ಭಾಗವಹಿಸಬೇಕು ಎಂದು ತಿಳಿಸಿದರು.
ಹಿಂದೂಗಳಲ್ಲಿ ಹಣೆಗೆ ಕುಂಕುಮದ ಬೊಟ್ಟು ಇಡುವ ಅಭ್ಯಾಸವಿದೆ, ಇದು ಅತ್ಯಂತ ಒಳ್ಳೆಯ ಪದ್ಧತಿ. ಕುಂಕುಮವನ್ನು ಹಣೆಯಲ್ಲಿ ಇಡುವುದರಿಂದ ಸದಾ ದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ ಎಂದು ಶ್ರೀಗಳು ತಿಳಿಸಿದರು.