ಜೋಡಿ ಕರಗ ಮಹೋತ್ಸವ ಸಂಪನ್ನ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.20:- ಕಳೆದ ಐದು ದಿನಗಳಿಂದ ಶ್ರದ್ಧಾ, ಭಕ್ತಿಭಾವದಿಂದ ನಡೆದ ಇಟ್ಟಿಗೆಗೂಡಿನ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮಾರಿಯಮ್ಮನವರ 100ನೇ ವರ್ಷದ ಜೋಡಿ ಕರಗ ಮಹೋತ್ಸವ ಭಾನುವಾರ ಸಂಪನ್ನಗೊಂಡಿತು.
ದಸರಾದಷ್ಟೇ ವೈಭವ ಹೊಂದಿರುವ, ಮಿನಿ ದಸರಾವೆಂದೇ ಖ್ಯಾತಿ ಗಳಿಸಿರುವ ಮೈಸೂರು ಕರಗವನ್ನು ದುಷ್ಟಶಕ್ತಿಯ ವಿರುದ್ಧ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿ ವರ್ಷ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಕರಗದ ಕೊನೆಯ ದಿನದ ಅಂಗವಾಗಿ ಭಾನುವಾರ ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ದೇವಿಯರಿಗೆ ಅಂಬಲಿ ಸೇವೆ ಮಾಡಲಾಯಿತು. ನಂತರ ಸ್ಥಳದಲ್ಲಿ ನೆರೆದಿದ್ದ ನೂರಾರು ಭಕ್ತರ ಸಮೂಹದ ನಡುವೆ ಅರಿಶಿನದ ಓಕುಳಿ ಉತ್ಸವ ನೆರೆವೇರಿಸಲಾಯಿತು. ಇದಾದ ತರುವಾಯ ಸಂಜೆ ಹೊತ್ತಿಗೆ ತಂಬಿಟ್ಟಿನ ಆರತಿ ಮಾಡಲಾಯಿತು. ಇಟ್ಟಿಗೆಗೂಡು ಬಡಾವಣೆ ಸೇರಿದಂತೆ ಅಕ್ಕ-ಪಕ್ಕದ ಬಡಾವಣೆಗಳ ಜನರು ಮನೆಯಿಂದ ತಂಬಿಟ್ಟನ್ನು ತಂದು ದೇವಿಯರಿಗೆ ನೈವ್ಯೇದ ಸಲ್ಲಿಸಿದರು. ಹಣ್ಣು-ಕಾಯಿ ಪೂಜೆ ಮಾಡಿಸಿ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು. ರಾತ್ರಿ ಸಂಪ್ರದಾಯದಂತೆ ಇಟ್ಟಿಗೆಗೂಡಿನ ಪ್ರಮುಖ ಬೀದಿಯಲ್ಲಿ ಕರಗದ ಮೆರವಣಿಗೆ ನಡೆಯಿತು. ಮಧ್ಯರಾತ್ರಿ ಉಯ್ಯಾಲೋತ್ಸವ ಜರುಗಿತು. ಬಳಿಕ ದೇವಸ್ಥಾನದ ಪ್ರಧಾನ ಅರ್ಚಕರು ಮಹಾಮಂಗಳಾರತಿ ನೆರವೇರಿಸಿದರು. ಈ ಸಮಯದಲ್ಲಿ ಭಕ್ತರ ಜಯಘೋಷಗಳು, ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಕರಗ ಮಹೋತ್ಸವಕ್ಕೆ ಶತಮಾನದ ಇತಿಹಾಸವಿದೆ. ಲೋಕಕಲ್ಯಾಣಕ್ಕಾಗಿ ದುರಿತ ನಿವಾರಿಣಿ, ಅಮೃತವರ್ಶಿಣಿಯಾದ ಜಗದಾಂಬೆಗೆ ಅಂದಿನಿಂದಲೂ ಕರಗ ಮಹೋತ್ಸವ ನಡೆಸಲಾಗುತ್ತದೆ. ಶತಮಾನಗಳ ಹಿಂದೆ ಊರನ್ನು ಸಾಂಕ್ರಾಮಿಕ ರೋಗ ಆವರಿಸಿ ದಿನನಿತ್ಯ ಹತ್ತಾರು ಜನ ಸಾವನ್ನಪ್ಪಲು ಪ್ರಾರಂಭಿಸಿದರು. ಒಂದೆಡೆ ಮನೆಮಂದಿ ರೋಗದಿಂದ ನರಳುತ್ತಿದ್ದರೆ ಮತ್ತೊಂದೆಡೆ ಮಳೆ ಇಲ್ಲದೆ ಕ್ಷಾಮ ಆವರಿಸಿತ್ತು. ಇವೆಲ್ಲದರ ಜತೆಗೆ ರೋಗದಿಂದ ದಿನನಿತ್ಯ ಸಾಯುವವರ ಅಂತ್ಯ ಸಂಸ್ಕಾರ ನಡೆಸುವುದೇ ಊರ ಜನರ ನಿತ್ಯಕಾಯಕವಾಗಿ ಬಿಟ್ಟಿತ್ತು. ಹಾಗಾಗಿ ಊರಿನ ಜನರೆಲ್ಲರೂ ಸೇರಿ ನಾಡದೇವತೆಯ ಮೊರೆ ಹೋಗಲು ನಿರ್ಧರಿಸಿದರು. ಆಗ ಪ್ರಾರಂಭವಾದುದೇ ಮೈಸೂರು ಕರಗ ಮಹೋತ್ಸವವಾಗಿದೆ.