ಬಸವ ತತ್ವ ರಕ್ಷಣೆಯಲ್ಲಿ ಸಂವಿಧಾನ ಕುರಿತ ವಿಚಾರ ಚಿಂತನೆ ಮತ್ತು ಬಸವಶ್ರೀ ಪುರಸ್ಕಾರ ಸಮಾರಂಭ
ಸಂಜೆವಾಣಿ ವಾರ್ತೆ
ಮಂಡ್ಯ.ಮೇ.20:- ಸರ್ವರನ್ನೂ ಒಳಗೊಂಡ ಸಮಸಮಾಜದ ಪರಿಕಲ್ಪನೆಯ ಬಸವ ತತ್ವದ ಆಧಾರದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆಂದು ಸಾಮಾಜಿಕ ಚಿಂತಕ ರಂಜಾನ್‍ದರ್ಗಾ ಪ್ರತಿಪಾದಿಸಿದರು.
ನಗರದ ಗಾಂಧಿಭವನದಲ್ಲಿ ಬಸವ ಜಯಂತಿ ಆಚರಣೆ ಅಂಗವಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಏರ್ಪಡಿಸಿದ್ದ `ಬಸವ ತತ್ವ ರಕ್ಷಣೆಯಲ್ಲಿ ಸಂವಿಧಾನ ಕುರಿತ ವಿಚಾರ ಚಿಂತನೆ ಮತ್ತು ಬಸವಶ್ರೀ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣನವರ ಇವ ನಮ್ಮವ ಇವ ನಮ್ಮವ ಎಂಬ ಎಲ್ಲರನ್ನೂ ನಮ್ಮವರೆಂದು ಕಾಣುವ ಸೂತ್ರವನ್ನು ಸಂವಿಧಾನದ ಪೀಠಿಕೆಯಲ್ಲೇ ಕಾಣಿಸಲಾಗಿದೆ ಎಂದರು.
ಜಗತ್ತಿನಲ್ಲಿಯೇ ಎಲ್ಲೂ ಕಾಣದಿರುವಂತಹ ಶರಣ ಸಂಕುಲ ನಮ್ಮ ಕನ್ನಡದ ನೆಲದಲ್ಲಿ ಒಂದುಗೂಡಿತ್ತು. 11ನೇ ಶತಮಾನದಲ್ಲಿಯೇ ಎಲ್ಲ ಕಾಯಕವರ್ಗಗಳ 700ಕ್ಕೂ ಹೆಚ್ಚಿನ ಪ್ರತಿನಿಧಿಗಳಿಂದ ಅನುಭವ ಮಂಟಪ ರೂಪುಗೊಂಡಿತ್ತು. ಅದೇ ಮಾದರಿಯಲ್ಲಿಯೇ ಇಂದಿನ ಪಾರ್ಲಿಮೆಂಟ್ ಕೂಡ ಇದೆ. ಆದರೆ ಬಸವ ತತ್ವವನ್ನು ಕಡೆಗಣಿಸಲಾಗುತ್ತಿದೆ. ಹಾಗಾಗಿ ಬಸವಣ್ಣನ ಪಾರ್ಲಿಮೆಂಟ್ ಸ್ಥಾಪನೆಯಾಗಬೇಕು, ಬಸವ ತತ್ವ ಮತ್ತು ಅಂಬೇಡ್ಕರ್ರ ಸಂವಿಧಾನ ರಕ್ಷಣೆಯಾಗಬೇಕೆಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, ಕಸುಬಿನ ಆಧಾರದಲ್ಲಿ ಜಾತಿ ಮಾಡಲಾಗಿದೆ. ಆದರೆ ಇಂದು ಅದೇ ಜಾತಿಗಳನ್ನು ರಾಜಕೀಯ ಲಾಭಕ್ಕೆ ಬಳಸಲಾಗುತ್ತಿದೆ. ಪರಿಣಾಮ ಜಾತಿ ಮತ, ಧರ್ಮಾಚರಣೆಗಳು ಗಟ್ಟಿಯಾಗಿ ಬೇರೂರುತ್ತಿವೆ. ಇಂದಿನ ಆಧುನಿಕ ದಿನಮಾನಗಳಲ್ಲೂ ಜಾತಿ ಎಂಬುದು ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಇತ್ತೀಚೆಗೆ ಮಂಡ್ಯದಂತಹ ನೆಲದಲ್ಲಿ ನಡೆದಿರುವ ಮರ್ಯಾದಾ ಹತ್ಯೆಗಳೇ ಸಾಕ್ಷಿ ಎಂದರು.
ಇಂತಹ ಕಾಲಘಟ್ಟದಲ್ಲಿ ಸಮಾಜವನ್ನು ಸರಿದಾರಿಗೆ ತರಬೇಕಾದ ಮಠ ಮಾನ್ಯಗಳೂ ಕೂಡ ರಾಜಕಾರಣಕ್ಕೆ ಇಳಿದುಬಿಟ್ಟಿವೆ. ಹಾಗಾಗಿ ಇಲ್ಲಿ ಧನಿಕನಿಗೊಂದು ನ್ಯಾಯ ಬಡವನಿಗೊಂದು ನ್ಯಾಯ ಎಂಬಂತಾಗಿದೆ. ಹಾಗಾಗಿ ನಾವು ಮತ್ತೆ ಹಿಂದಕ್ಕೆ ಹೋಗಿದ್ದೇವಾ? ಅಥವಾ ಮುಂದಕ್ಕೆ ಕಾಲಿರಿಸಿದ್ದೇವಾ ಎಂಬ ಸಂಶಯ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಹಣಬಲ ಮತ್ತು ಜಾತಿಬಲದ ಮೇಲೆ ರಾಜಕೀಯ ನಿಂತಿದೆ. ಹಾಗಾಗಿ ಸಾಮಾಜಿಕ ನ್ಯಾಯ ಎಂಬುದು ಮರೀಚಿಕೆಯಾಗುತ್ತಿದೆ ಎಂದು ವಿಷಾಧಿಸಿದರು.
ಪ್ರಾಸ್ತಾವಿಕ ನುಡಿಯಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಇಂದಿನ ಆಧುನಿಕ ಯುಗದಲ್ಲೂ ಜಾತೀಯತೆ, ಕೋಮುವಾದ, ಮಹಿಳಾ ಶೋಷಣೆ ಮುಂದುವರೆದಿದೆ. ಶೋಷಿತರು ಮತ್ತು ತಬ್ಬಲಿ ಸಮಾಜಗಳು ಉಳಿವಿನ ಹೋರಾಟ ನಡೆಸುತ್ತಿವೆ. ಈ ವ್ಯವಸ್ಥೆಯ ಸುಧಾರಣೆಗೆ ಬಸವ ತತ್ವವೊಂದೇ ಪರಿಹಾರ ಮಾರ್ಗ ಎಂದ ಅವರು, ಬಸವ ತತ್ವದ ಆಶಯದಲ್ಲೇ ರೂಪುಗೊಂಡಿರುವ ಸಂವಿಧಾನ ಸಂರಕ್ಷಣೆಯ ಮೂಲಕ ಆಧುನಿಕ ಅನುಭವ ಮಂಟಪವನ್ನು ಜೀರ್ಣೋದ್ಧಾರ ಮಾಡಬೇಕಿದೆ ಎಂದು ತಿಳಿಸಿದರು.
ಬಳಿಕ ಜಿಲ್ಲೆಯ ವಿವಿಧ ಕಾಯಕ ವರ್ಗಗಳ 12 ಮಂದಿ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ಹಾಗೂ ಕಾಯಕಯೋಗಿ ಪ್ರತಿಷ್ಠಾನದ ವತಿಯಿಂದ ಸಾಮಾಜಿಕ ಚಿಂತಕ ರಂಜಾನ್‍ದರ್ಗಾ ಅವರಿಗೆ ಕಾಯಕಯೋಗಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮೈಶುಗರ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್, ಕಾಯಕಯೋಗಿ ಪ್ರತಿಷ್ಠಾನದ ಎಂ.ಶಿವಕುಮಾರ್, ಬಾಬುನಾಯಕ್, ಸುರೇಶ್‍ಬಾಬು ಮತ್ತಿತರರು ಪಾಲ್ಗೊಂಡಿದ್ದರು.