ಕಣ್ಮನ ಸೆಳೆದ ತಿಂಗಳ ಸೊಬಗುಚಿಣ್ಣರ ನೃತ್ಯಕ್ಕೆ ಮನಸೋತ ಕಲಾ ಪ್ರೇಮಿಗಳು
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಮೇ 19: ನಗರದ  ಸಾಂಸ್ಕೃತಿಕ ಸಮುಚ್ಚದ  ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ನಿನ್ನೆ ಸಂಜೆ  ಆಯೋಜಿಸಿದ್ದ ‘ತಿಂಗಳ ಸೊಬಗು’ ಗಮನ ಸೆಳೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ  ಇದನ್ನು ಆಯೋಜಿಸಿತ್ತು. ಇನ್ನು ಮುಂದೆ ಪ್ರತಿ
ತಿಂಗಳ ಮೂರನೇ ಶನಿವಾರದಂದು ಈ  “ತಿಂಗಳ ಸೊಬಗು” ಕಾರ್ಯಕ್ರಮ ಆಯೋಜಿಸಿ ಸ್ಥಳೀಯ ಮಟ್ಟದ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ.
 ಕಾರ್ಯಕ್ರಮದಲ್ಲಿ ಸೂರ್ಯ ಕಲಾ ಟ್ರಸ್ಟ್ ನ ಸಾಂಸ್ಕೃತಿಕ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ಯರಿಸ್ವಾಮಿ ಅವರ ಹಾಸ್ಯ ಚಟಾಕಿಗೆ ನೆರೆದಿದ್ದವರು ನಗೆಗಡಲಲ್ಲಿ ತೇಲಾಡಿದರು.
ಬಳ್ಳಾರಿಯ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಸುಗಮ ಸಂಗೀತವು ಕೇಳುಗರ ಕಿವಿ ತಂಪಾಗಿಸುತ್ತಿತ್ತು ಹಾಗೂ ಸೂರ್ಯ ಕಲಾ ಟ್ರಸ್ಟ್ ನ ಚಿಣ್ಣರ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನರಂಜನೆಗೆ ಪಾತ್ರವಾಯಿತು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ  ರಾಹುಲ್ ಶರಣಪ್ಪ ಸಂಕನೂರ,  ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್, ರಂಗ ನಿರ್ದೇಶಕ ಜಗದೀಶ್  ಸೇರಿದಂತೆ  ಅನೇಕ‌ಕಲಾವಿದರು  ಉಪಸ್ಥಿತರಿದ್ದರು.