ಭ್ರಷ್ಟಾಚಾರ ಮಿತಿಮೀರಿದೆ: ಬೆಲ್ಲದ
ಹುಬ್ಬಳ್ಳಿ, ಮೇ 19: ರಾಜ್ಯದ ಎರಡನೇ ರಾಜಧಾನಿಯಾಗಿರುವ ಹು-ಧಾದಲ್ಲಿ ಮತ್ತೊಂದು ಅಹಿತಕರ ಘಟನೆ ನಡೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದರು.
ನಗರದಲ್ಲಿ ಹತ್ಯೆಗೀಡಾದ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆÇಲಿಸ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅವಳಿನಗರದಲ್ಲಿ ಗಾಂಜಾ, ಮದ್ಯ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದನ್ನು ಮಟ್ಟ ಹಾಕಬೇಕು. ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕೆಳವರ್ಗದ ಪೆÇಲೀಸರನ್ನು ಅಂತರ ಜಿಲ್ಲೆಗೆ ವರ್ಗಾವಣೆ ಮಾಡುವ ಕಾನೂನನ್ನು ಜಾರಿಗೆ ತರಬೇಕು, ಹೀಗಾದಾಗ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಲು ಸಾಧ್ಯವಾಗುತ್ತದೆ ಎಂದರು.
ಅಂಜಲಿ ಕುಟುಂಬಸ್ಥರಿಗೆ ಸೋನಿಯಾಗಾಂಧಿ ನಗರದಲ್ಲಿ ಜಾಗವನ್ನು ನೀಡಬೇಕು, ಇಲ್ಲವೇ ಮನೆ ನಿರ್ಮಿಸಿ ಕೊಡಬೇಕು. ಕುಟುಂಬಕ್ಕೆ ಭದ್ರತೆಯನ್ನು ಒದಗಿಸಬೇಕು. ಸರ್ಕಾರ ಕಣ್ಣು ಒರೆಸುವ ತಂತ್ರವನ್ನು ಈ ವಿಚಾರದಲ್ಲಿ ಮಾಡಬಾರದು ಎಂದು ಅವರು ಹೇಳಿದರು.