ಎ.ಟಿ.ಎನ್.ಸಿ.ಸಿ ಕಾಲೇಜಿನಲ್ಲಿ ‘ಆಚಾರ್ಯ ಅದ್ವಿತೀಯ’ ಉದ್ಘಾಟನೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ.ಮೇ.೧೯ : ಮೊಬೈಲ್ ಎಂಬ ಅಂಧತ್ವದಿಂದ ಹೊರಬಂದು ಸಮಾಜದ ವಾಸ್ತವತೆಯ ಜ್ಞಾನ ಪಡೆದುಕೊಳ್ಳಿ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಡಾ.ಶರತ್ ಅನಂತಮೂರ್ತಿ ಹೇಳಿದರು.ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಶನಿವಾರ ಕಾಲೇಜಿನ ಚಂದನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಆಚಾರ್ಯ ಅದ್ವಿತೀಯ’ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ನಿರ್ವಹಣಾ ಉತ್ಸವ ಉದ್ಘಾಟಿಸಿ ಮಾತನಾಡಿದರು.ಯುವ ಸಮೂಹ ಮೊಬೈಲ್ ಎಂಬ ಯುನಿವರ್ಸಿಟಿಗೆ ಸೀಮಿತರಾಗಿದ್ದಾರೆ. ಅಲ್ಲಿ ಬರುವ ವಿಷಯಗಳೆ ಸತ್ಯ ಎಂದು ನಂಬಿದ್ದಾರೆ. ಅಂತಹ ಮನಸ್ಥಿತಿಗಳಿಂದ ಹೊರಬಂದು ನಮ್ಮ ಸಮಾಜದ ವಾಸ್ತವತೆಯ ಜ್ಞಾನ ಪಡೆಯಿರಿ. ಶೈಕ್ಷಣಿಕ ಕಲಿಕೆಯ ಜೊತೆಗೆ ಕೌಶಲ್ಯ ಸಹಿತ ಜ್ಞಾನಾರ್ಜನೆ ನಿಮ್ಮದಾಗಲಿ ಎಂದು ಹಾರೈಸಿದರು.ಕಲೆ, ಸಾಹಿತ್ಯ ಸಾಂಸ್ಕೃತಿಕ ಚಿಂತನೆಗಳು ಸದಾ ನಮ್ಮನ್ನು ಬಲಗೊಳಿಸುತ್ತದೆ. ಬದುಕಿನ ಅದ್ವಿತೀಯಕ್ಕೆ ವಿದ್ಯಾರ್ಥಿ ದೆಸೆಯಿಂದಲೇ ಸದಾಭಿರುಚಿ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ನಾವೀನ್ಯಯುತ ಯೋಜನೆಗಳನ್ನು ರೂಪಿಸುವಾಗ ಇಂತಹ ಯೋಚನೆ ಸಮಾಜಕ್ಕೆ ಮಾರಕವೊ ಪೂರಕವೊ ಎಂಬ ಜವಾಬ್ದಾರಿಯುತ ನಡೆ ನಿಮ್ಮಲಿರಲಿ ಎಂದು ಹೇಳಿದರು.