ಲೋಕಾಯುಕ್ತ ದಾಳಿ : ಬಿಇಒ ಪರಾರಿ
ಕಲಬುರಗಿ,ಮೇ 19:ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿ ಹಣವನ್ನು ಮಂಜೂರು ಮಾಡಲು 50 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಳಂದ ಬಿಇಒ ಹಣಮಂತ ರಾಠೋಡ ಪರವಾಗಿ ಹಣ ಪಡೆಯುತ್ತಿದ್ದ ಮಧ್ಯವರ್ತಿ ರಾಧಾಕೃಷ್ಣ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ದಾಳಿಯ ಮಾಹಿತಿ ಸಿಗುತ್ತಿದ್ದಂತೆ ಬಿಇಒ ಹಣಮಂತ ರಾಠೋಡ ಪರಾರಿಯಾಗಿದ್ದಾರೆ.
ಬಿಇಒ ಪರವಾಗಿ ಲಂಚದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಮದ್ಯವರ್ತಿ ,ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ ಶಿಕ್ಷಕ ರಾಧಾಕೃಷ್ಣ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.ಶಿಕ್ಷಕಿಯೊಬ್ಬರ ಪಿಂಚಣಿಗೆ ಸಂಬಂಧಿಸಿದ ಕಡತಗಳಿಗೆ ಸಹಿ ಮಾಡಲು ಲಂಚ ನೀಡುವಂತೆ ಬಿಇಒ ಹಣಮಂತ ರಾಠೋಡ ಬೇಡಿಕೆ ಇಟ್ಟಿದ್ದರು.ಶಿಕ್ಷಕಿಯ ಪತಿ ಯಶವಂತ ಬಿರಾದಾರ ಲೋಕಾಯುಕ್ತರಿಗೆ ದೂರು ನೀಡಿದ್ದರು.ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಹಾಳ,ಹಾಗೂ ಪಿಐ ರಾಜಶೇಖರ ಹಳಿಗೋದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ನಕಲು ಅಂಕಪಟ್ಟಿಗಾಗಿ ಲಂಚ:ಇಬ್ಬರು ಎಫ್‍ಡಿಎ ಬಂಧನ
ಕಲಬುರಗಿ ನಗರದ ಪ್ರಾಧೇಶಿಕ ಶಿಕ್ಷಣ ಆಯುಕ್ತರ ಕಚೇರಿ ಆವರಣದ ಎಸ್‍ಎಸ್‍ಎಲ್‍ಸಿ ಮಂಡಳಿ ಕಚೇರಿಯಲ್ಲಿ ನಕಲು ಅಂಕಪಟ್ಟಿ ಮುದ್ರಿಸಲು ಲಂಚ ಪಡೆದ ಎಫ್‍ಡಿಎ ಶಿವಶಂಕರಯ್ಯ ಮತ್ತು ಆತನಿಗೆ ಸಹಕರಿಸಿದ ಎಫ್‍ಡಿಎ ಜಟಿಂಗರಾಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಎಸ್‍ಎಸ್‍ಎಲ್‍ಸಿ ಮಂಡಳಿ ಕಚೇರಿಯಲ್ಲಿ ಬೀದರ ಜಿಲ್ಲೆ ವಿಭಾಗ ನಿರ್ವಹಣೆ ಮಾಡುತ್ತಿದ್ದ ಶಿವಶಂಕರಯ್ಯ ನಕಲು ಅಂಕಪಟ್ಟಿ ನೀಡಲು ಅರುಣ ಹತ್ತೀಬ್ ಎಂಬುವವರ ಹತ್ತಿರ 75ಂ ರೂ ಸರಕಾರಿ ಫೀಸು ಇದ್ದರೂ 5 ಸಾವಿರ ರೂ ಗೆ ಬೇಡಿಕೆ ಇಟ್ಟಿದ್ದ.ಮೇ 17 ರಂದು 3 ಸಾವಿರ ರೂ ಆನ್‍ಲೈನ್ ಪೇಮೆಂಟ್ ಪಡೆದಿದ್ದಾನೆ.ಉಳಿದ 2 ಸಾವಿರ ರೂ ಶನಿವಾರ ಬೆಳಿಗ್ಗೆ ಕಚೇರಿಯಲ್ಲಿ ಪಡೆಯುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಶಿವಶಂಕರಯ್ಯರನ್ನು ವಶಕ್ಕೆ ಪಡೆದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ ಗಂಗಲ್,ಅಕ್ಕಮಹಾದೇವಿ,ಸಿಬ್ಬಂದಿ ಯಮನೂರಪ್ಪ,ಪ್ರದೀಪ,ರಾಣೋಜಿ,ಶಾಮನೂರ ಇತರರು ಕಾರ್ಯಾಚರಣೆ ತಂಡದಲ್ಲಿದ್ದರು.