ಸೊನ್ನೆಯಿಂದಲೇ ಪರಿಶ್ರಮಿಸಿ ಆರಂಭಿಸಿದ ಕಾರ್ಯ ನೂರಕ್ಕೆ ನೂರು ಯಶಸ್ವಿ
ವಿಜಯಪುರ,ಮೇ.19:ಸೊನ್ನೆಯಿಂದಲೇ ಪರಿಶ್ರಮಿಸಿ ಆರಂಭಿಸಿದ ಕಾರ್ಯ ನೂರಕ್ಕೆ ನೂರು ಯಶಸ್ವಿ ಆಗಲು ಸಾಧ್ಯವಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಎಸ್. ಕುಂದರ್ ಅವರು ಹೇಳಿದರು.
ನ್ಯಾಯಾಧೀಶÀ ಕುಂದರ ಅವರು ವರ್ಗಾವಣೆ ಆಗಿರುವ ನಿಮಿತ್ಯ ಅವರಿಗೆ ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರೊಬೊನೊ, ಪೆನಲ್, ಡಿಫೆನ್ಸ್ ಕೌನ್ಸಿಲ್, ಮಧ್ಯಸ್ಥಗಾರ ವಕೀಲರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕಾವ್ಯಾರ್ಪಣೆ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿರುವ ವಿವಿಧ ಕಾಯಕ ನಿರತರು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನೂರಕ್ಕೆ ನೂರರಷ್ಟು ಅದರಲ್ಲೇ ತಲ್ಲೀನರಾಗಿ ಶ್ರಮಿಸಿದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ನಾವು ಮಾಡುವ ಕೆಲಸ ಸಮಾಜಕ್ಕೆ ದಾರಿ ದೀಪವಾಗಬೇಕು ಎಂದರು.
ಇನ್ನೋರ್ವ ಹಿರಿಯ ಶ್ರೇಣಿ ನ್ಯಾಯಾಧೀಶೆ ಕೆ. ಉಮಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಜಯಪುರಕ್ಕೆ ಬರುವಾಗ ಇಲ್ಲಿನ ಭಾಷೆ ಮತ್ತು ಜನರ ಕುರಿತು ಸ್ವಲ್ಪ ಆತಂಕ ಮನದಲ್ಲಿತ್ತು. ಆದರೆ ಇಲ್ಲಿ ಬಂದು ಮೂರು ವರ್ಷ ಸೇವೆ ಸಲ್ಲಿಸಿದ ನಂತರ ಇಲ್ಲಿನ ಜನರಲ್ಲಿ ನ್ಯಾಯದ ಬಗ್ಗೆ ನ್ಯಾಯಾಲಯದ ಬಗ್ಗೆ ಇರುವ ಗೌರವ ಹೆಮ್ಮೆ ಕಂಡು ನಮಗೆ ಇನ್ನು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು, ವಿಜಯಪುರದಲ್ಲಿ ಕ್ರಿಯಾಶೀಲ ಮತ್ತು ಪರಿಶ್ರಮ ಮಾಡುವ ವಕೀಲರಿದ್ದು, ಅವರ ಸೇವೆ ಜನರು ಪಡೆದುಕೊಂಡು ಶೀಘ್ರ ನ್ಯಾಯ ಪಡೆದುಕೊಳ್ಳುತ್ತಿರುವುದು ಸಂತೋಷಕರ ಸಂಗತಿ ಎಂದರು.
ಹಿರಿಯ ಪ್ರೊಬೊನೊ ನ್ಯಾಂiÀiವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಕಾವ್ಯಭಾಷೆಯಲ್ಲೇ ಮಾತನಾಡಿ, ನ್ಯಾಯಾಧೀಶರಾದ ಕುಂದರ ಅವರು ಜಿಲ್ಲೆಯಲ್ಲಿ ಆಡದೇ ಕೆಲಸ ಮಾಡಿ ತೋರಿಸಿದ ಸಾಧಕರು. ಅವರ ಅವಧಿಯಲ್ಲಿ ಪ್ರಾಧಿಕಾರವು ಜನರಿಗೆ ಕಾನೂನು ಅರಿವು ನೆರವು ನೀಡುವುದರ ಜೊತೆಗೆ ಅಲ್ಲಲ್ಲಿ ಇದ್ದ ಸಾಮಾಜಿಕ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಇತಿಹಾಸದಲ್ಲೇ ಪ್ರೊಬೊನೋ ವಕೀಲರನ್ನು ನೇಮಿಸಲು ಕಾರಣಿಗರಾದ ಕೀರ್ತಿ ಇವರ ಅವಧಿಗೆ ಸಲ್ಲುತ್ತದೆ. ಅವರ ಅವಧಿಯಲ್ಲಿ ವಿಜಯಪುರ ಜಿಲ್ಲೆ ಪ್ರಾಧಿಕಾರವು ರಾಜ್ಯಕ್ಕೆ 4ನೇ ಸ್ಥಾನಕ್ಕೆ ಏರಿರುವುದು ಸಂತೋಷಕರ ಸಂಗತಿ. ಕುಂದರ ಅವರು ಸರಳ ಮತ್ತು ಅಷ್ಟೇ ಕಠೀಣವಾಗಿ ಕಾನೂನು ಪಾಲಿಸುವ ಅವರ ಕಾರ್ಯ ದಕ್ಷತೆ ಮೆಚ್ಚುವಂತಹದು ಎಂದು ಬಣ್ಣಿಸಿದರು.
ಹಿರಿಯ ನ್ಯಾಯವಾದಿ ಆರ್.ಎಸ್. ನಂದಿ ಅವರು ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿಶೇಷವಾಗಿ ಸಂತೋಷ ಕುಂದರ್ ಅವರ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳು ಇತ್ಯರ್ಥವಾಗಿದ್ದು, ಸಾರ್ವಜನಿಕರು ಕಕ್ಷಿದಾರರು ತಮ್ಮ ಪ್ರಕರಣಗಳನ್ನು ರಾಜಿ ಸಂಧಾನ ಮೂಕಲ ಇತ್ಯರ್ಥ ಪಡಿಸಿಕೊಂಡು ಉತ್ತಮ ಜೀವನ ಸಾಗಿಸುತ್ತಿರುವುದು ಕುಂದರ್ ಅವರ ಜೀವನಕ್ಕೆ ಉದಾಹರಣೆಯಾಗಿರುತ್ತದೆ.
ನ್ಯಾಯವಾದಿಗಳಾದ ಬಸವರಾಜ ಮಠ, ಲಾಹೋರಿ, ಮಸೂತಿ ಮಾತನಾಡಿ, ಕುಂದರ್ ಅವರ ಸೇವೆಯನ್ನು ಪ್ರಶಂಸಿಸಿದರು.
ಕಾನೂನು ಮಹಾವಿದ್ಯಾಯದ ಪ್ರಾಚಾರ್ಯೆ ಸುಮಾ ದೇಸಾಯಿ ನಿರೂಪಿಸಿದರು. ಜಿಲ್ಲಾ ವಕೀಲರ ಸಂಘದ ಗೌರವ ಕಾರ್ಯದರ್ಶಿ ಅಶೋಕ ಜೈನಾಪೂರ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಕೆ.ಎಫ್. ಅಂಕಲಗಿ, ರಾಜು ಬಿದರಿ ಮುಂತಾದವರು ಇದ್ದರು.