ಜನರ ಧಾರ್ಮಿಕ ಭಾವನೆ ಜೊತೆಗೆ ಚೆಲ್ಲಾಟವಾಡುವುದು ಅಕ್ಷಮ್ಯ ಅಪರಾಧ: ಸಚಿವ ಎಂ.ಬಿ. ಪಾಟೀಲ
ವಿಜಯಪುರ,ಸೆ.23:ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಮಿಶ್ರಣ ಮಾಡಿರುವ ವಿಚಾರ ಜನರ ಧಾರ್ಮಿಕ ಭಾವನೆಗೆ ಸಂಬಂಧಿಸಿದೆ. ಜನರ ಧಾರ್ಮಿಕ ಭಾವನೆಗಳ ಜೊತೆಗೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ತಿರುಪತಿ ಲಡ್ಡುದಲ್ಲಿ
ದನದ ಕೊಬ್ಬನ್ನು ಬೆರೆಸಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದರು.
ತಿರುಪತಿ ಲಡ್ಡುದಲ್ಲಿ ಪಾವಿತ್ರ್ಯತೆ ಇದೆ. ದನದ ಕೊಬ್ಬು ಬೆರೆಸುವುದು ತೀವ್ರವಾದ, ಘೋರವಾದ ಅಪರಾಧ. ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಮೇಲಿಂದ ಮೇಲೆ ಲಡ್ಡು ತಪಾಸಣೆ ಮಾಡಬೇಕಿತ್ತು ಎಂದು ತಿಳಿಸಿದರು.
ಈ ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೆಯೋ ಅವರೆಲ್ಲರ ಮೇಲೆ ಕ್ರಮ ಆಗಬೇಕು ಎಂದು ಹೇಳಿದರು.
ವಿಜಯಪುರದ ಜಿಲ್ಲಾಡಳಿತ ಭವನಕ್ಕೆ ಹಣ ಬಿಡುಗಡೆಯಾಗಿದ್ದು, ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು.
ಏಳೆಂಟು ತಿಂಗಳ ಹಿಂದೆ ಆಗಬೇಕಿತ್ತು. ನಾನು ಪ್ರಯತ್ನಿಸಿದ್ದರಿಂದ ಇದೀಗ ಈ ಯೋಜನೆ ಸಾಕಾರವಾಗಲಿದೆ ಎಂದು ನುಡಿದರು.
ಆರ್ ಸಿ ಬಿ (ಚೆನ್ನಮ್ಮ ಮತ್ತು ರಾಯಣ್ಣ ಬ್ರಿಗೇಡ್) ನಿರ್ಮಾಣ ವಿಚಾರ ಅದನ್ನು ಮಾಡಿದವರಿಗೆ ಕೇಳಿ.
ಅದರ ಬಗ್ಗೆ ನಾನು ಮಾತನಾಡಿಲ್ಲ. ನೋ ಕಮೆಂಟ್ ಎಂದರು.
ಶಾಸಕ ಮುನಿರತ್ನ ಮೇಲೆ ಯಾರೂ ಸ್ವಾಭಾವಿಕವಾಗಿ ಊಹಿಸದ ಆಪಾದನೆಗಳು ಅವರ ಮೇಲೆ ಬರುತ್ತಿವೆ. ಎಲ್ಲದರ ಕುರಿತು ತನಿಖೆ ಆಗಬೇಕು. ಸತ್ಯಾಸತ್ಯತೆ ಜನರಿಗೆ ಗೊತ್ತಾಗಬೇಕು ಎಂದರು.
ನಿಜವಾಗಿ ಆ ರೀತಿ ಘೋರ ಕೃತ್ಯ ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ಮುನಿರತ್ನ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಹನಿಟ್ರ್ಯಾಪ್, ಸಿಡಿ ಮಾಡುವುದು, ಹೆಣ್ಣುಮಕ್ಕಳ ಬಳಕೆ ಇವೆಲ್ಲ ಹೇಯ ಕೃತ್ಯಗಳು ಎಂದು ತಿಳಿಸಿದರು.
ರಾಜ್ಯಪಾಲರ ಹಸ್ತಕ್ಷೇಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು. ಎಲ್ಲರೂ ಹೋಗಿ ರಾಜ್ಯಪಾಲರಿಗೆ ದೂರು ಕೊಡುವುದು. ಅವರು ಅದನ್ನು ಪರಿಗಣಿಸುವುದು ಆಗಬಾರದು. ಪೆÇಲೀಸ್ ಸ್ಟೇಶನ್ ಬದಲು ರಾಜ್ಯಪಾಲಿಗೆ ದೂರು ಕೊಡುವುದು ಆಗಬಾರದು. ರಾಜ್ಯಪಾಲರಿಗೆ ದೂರು ಕೊಡುವುದೇ ಒಂದು ಹೊಸ ದಂಧೆ ಶುರು ಆಗುತ್ತದೆ.
ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆ. ಅವರು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಹಾದಿಯಲ್ಲಿ ಹೋಗುವವರು ಬಂದು ಸಿಕ್ಕ ಸಿಕ್ಕವರ ಮೇಲೆ ಅರ್ಜಿ ಹಾಕಿದರೆ ಹೇಗೆ? ಎಂದರು.
ಯತ್ನಾಳ ಅವರ ಬಗ್ಗೆ ನಾನು ಮಾತನಾಡುವುದಿಲ್ಲ.
ರಾಹುಲ್ ಗಾಂಧಿ, ಟಿಪ್ಪುಸುಲ್ತಾನ ಸೇರಿದಂತೆ ಎಲ್ಲರ ತಾಯಿ ಬಗ್ಗೆ ಯತ್ನಾಳ ಮಾತನಾಡುತ್ತಾರೆ.
ಯತ್ನಾಳ ಅವರಿಗೆ ಬೇರೆಯವರ ತಾಯಿ, ತಂದೆ ಹೆಂಡತಿ, ಮಕ್ಕಳು ಯಾಕೆ ಬೇಕು.? ರಾಜಕಾರಣ ಕೇವಲ ರಾಜಕಾರಣ ಎಂಬಂತೆ ಮಾಡಬೇಕು ಅಷ್ಟೆ ಎಂದು ಹೇಳಿದರು.