ಅಂಗನವಾಡಿಗಳಲ್ಲಿ ಆಹಾರ ನೀಡಿಕೆಯಲ್ಲಿ ವಂಚನೆ ಮಾಡದಿರಿ-ಸುನಿಲ ಕರೆ
ಕೋಲಾರ,ಅ,೫-ಗರ್ಭಿಣಿಯರಿಗೆ, ಮಕ್ಕಳಿಗೆ, ಬಾಣಂತಿಯರಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಅಂಗನವಾಡಿಗಳ ಮೂಲಕ ಹಲವಾರು ಸೌಲಭ್ಯ ಒದಗಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ, ಆಹಾರ ನೀಡಿಕೆಯಲ್ಲಿ ಯಾವುದೇ ವಂಚನೆಗೆ ಅವಕಾಶ ನೀಡದಿರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ಎಚ್ಚರಿಸಿದರು.
ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸುಗಟೂರು ಗ್ರಾಮ ಪಂಚಾಯಿತಿ ಇವರ ಆಶ್ರಯದಲ್ಲಿ ಸುಗಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಆಹಾರ ಮತ್ತು ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಗು ಹುಟ್ಟಿದ ೬ ತಿಂಗಳವರೆಗೂ ಕಡ್ಡಾಯವಾಗಿ ತಾಯಿ ಎದೆಹಾಲು ಕುಡಿಸಬೇಕು, ಅದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದ ಅವರು, ಬೇಕರಿ ತಿನಿಸು ತಿನ್ನದೇ ಕಾಲಕಾಲಕ್ಕೆ ತರಕಾರಿ,ಹಣ್ಣು ಹಾಲು ಸೇವಿಸುವ ಮೂಲಕ ಉತ್ತಮ ಆರೋಗ್ಯ ಪಡೆಯಿರಿ ಎಂದು ಕಿವಿಮಾತು ಹೇಳಿದರು.
ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ನೆಮ್ಮದಿ ಸಾಧ್ಯ ಎಂದ ಅವರು, ಮಕ್ಕಳ ಬೆಳವಣಿಗೆಗೆ ತಕ್ಕಂತೆ ಆಹಾರ ನೀಡಿ, ಅವರನ್ನು ಸಕಾಲಕ್ಕೆ ಶಾಲೆಗೆ ಸೇರಿಸಿ, ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿಸದಿರಿ ಎಂದು ತಾಕೀತು ಮಾಡಿದರು.
ಬಾಲ್ಯವಿವಾಹ ಮಾಡುವುದರಿಂದಾಗಿ ಹುಟ್ಟುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತೆ ಮತ್ತು ಮಗು ಹುಟ್ಟುವ ಪೂರ್ವದಲ್ಲಿ ಸಾಯುವ ಸಾಧ್ಯತೆಯೂ ಹೆಚ್ಚಿರುತ್ತದೆ ಆದ್ದರಿಂದ ಕಾನೂನಿನಲ್ಲು ಶಿಕ್ಷಾರ್ಹವಾಗಿರುವ ಬಾಲ್ಯವಿವಾಹ ಮಾಡದಿರಿ ಎಂದರು.
ಬಾಲ್ಯವಿವಾಹ ಸಮಾಜಕ್ಕೆ ಕಂಟಕವಾಗಿದೆ ಎಂದ ಅವರು ಇದರ ಸಂಪೂರ್ಣ ತಡೆಗೆ ವಿದ್ಯಾರ್ಥಿ ಸಯುದಾಯದ ಸಹಕಾರ ಅಗತ್ಯವಿದೆ, ನಿಮ್ಮ ಸುತ್ತಮುತ್ತ ಬಾಲ್ಯವಿವಾಹ ಆಗುತ್ತಿದ್ದರೆ ನೀವು ಕೂಡಲೇ ೧೦೯೮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.
ಭ್ರೂಣ ಲಿಂಗ ಪತ್ತೆ ಮಾಡುವುದು ಸಹಾ ಅಪರಾಧವಾಗಿದ್ದು,ಕಠಿಣ ಶಿಕ್ಷೆ ಇದೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೂ ಸರ್ಕಾರ ಕಾನೂನು ಮಾಡಿದ್ದು, ಇದರ ಕುರಿತು ನೀವು ಅರಿತು ಸಮಾಜಕ್ಕೂ ತಿಳಿಸಿಕೊಡಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಭೂಪತಿಗೌಡ ಮಾತನಾಡಿ, ಸರ್ಕಾರ ಮಹಿಳೆಯರು ಮತ್ತು ಮಕ್ಕಳಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ, ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರ ನೀಡುತ್ತಿದೆ, ಇದರ ಸದುಪಯೋಗ ಪಡೆಯಬೇಕು ಎಂದ ಅವರು, ಈ ಕುರಿತು ವೈದ್ಯಾಧಿಕಾರಿಗಳು ಮಹಿಳೆಯರಿಗೆ ಅರಿವು ನೀಡಬೇಕು ಎಂದರು.
ವೇದಿಕೆಯಲ್ಲಿ ಸುಗಟೂರು ವೈದ್ಯಾಧಿಕಾರಿ ಡಾ.ಕಾವ್ಯ, ಮಕ್ಕಳ ರಕ್ಷಣಾ ಅಭಿವೃದ್ದಿ ಅಧಿಕಾರಿ ವಿನೋದ್ ಕುಮಾರ್, ಪಿಡಿಒ ರಮೇಶ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬೈರೇಗೌಡ, ಗ್ರಾ.ಪಂ ಸದಸ್ಯರಾದ ನಾರಾಯಣಸ್ವಾಮಿ, ಶೋಭಾರಾಣಿ, ಮಂಜುನಾಥ್ ಮತ್ತಿತರರಿದ್ದರು.