ಟಿ.ಎಸ್.ಪಿ. ಹಣ ದುರ್ಬಳಕೆ ವಿರುದ್ದ ಕ್ರಮಕ್ಕೆ ಆಗ್ರಹ
ಕೋಲಾರ,ಅ.೫-ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಕಾಯ್ದೆಯನ್ನು ಉಲ್ಲಂಘಿಸಿ ಹಣ ದುರುಪಯೋಗಪಡಿಸಿಕೊಂಡಿರುವ ದಲಿತ ವಿರೋಧಿ, ಸರ್ಕಾರದ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಮಂಗಳ ಅವರ ಮುಖಾಂತರ ರಾಜ್ಯಪಾಲರಿಗೆ ಡಿ.ಎಸ್.ಎಸ್.ಭೀಮವಾದ ಹಾಗೂ ರಿಪಬ್ಲಿಕನ್ ಪರ್ಟಿ ಆಫ್ ಇಂಡಿಯಾ ವತಿಯಿಂದ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ/ಎಸ್.ಟಿ ಸಮುದಾಯಗಳನ್ನು ವಂಚಿಸುತ್ತಾ ಬಂದಿದೆ. ಕಳೆದ ಒಂದು ವರ್ಷದಿಂದ ಎಸ್.ಸಿ/ಎಸ್.ಟಿ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸುಮಾರು ೨೫ ಸಾವಿರ ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿದೆ. ಇದರಿಂದ ಈ ಸಮುದಾಯಗಳಿಗೆ ಸರ್ಕಾರ ಅನ್ಯಾಯ ಮಾಡಿದೆ.
ಎಸ್.ಸಿ/ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್.ಸಿ. ಎಸ್.ಪಿ/ಟಿ.ಎಸ್.ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದನ್ನು ಕೂಡಲೇ ವಾಪಸ್ಸು ನೀಡಬೇಕು, ಎಸ್.ಸಿ.ಎಸ್. ಮಣಿವಣ್ಣನ್ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು, ವಸತಿ ಶಾಲೆಗಳ ನೇಮಕದಲ್ಲಿ ವಿಧಿಸಿರುವ ನಿಬಂಧನೆಗಳನ್ನು ಕೂಡಲೇ ರದ್ದುಪಡಿಸಿ, ಎಲ್ಲಾ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ನಿಯೋಗದಲ್ಲಿ ಹಳೇಹಳ್ಳಿ ತಿಮ್ಮರಾಯಪ್ಪ, ವಕ್ಕಲೇರಿ ಶಂಕರ್, ವೇಮಗಲ್ ರವೀಂದ್ರ, ವಕ್ಕಲೇರಿ ಅವಿನಾಶ್, ಶ್ರೀಧರಮೂರ್ತಿ, ಮುರಳಿ, ಕೆ.ಜಿ.ಎಫ್ ಚಾಂಪಿಯನ್ ಬಾಬು, ತಿಮ್ಮರಾಯಪ್ಪ, ವರದೇನಹಳ್ಳಿ ಮುನಿವೆಂಕಟಪ್ಪ, ಮೈಲಾಂಡಹಳ್ಳಿ ಆನಂದ್, ಲಕ್ಷ್ಮೀಪುರ ಲೋಕೇಶ್ ಇದ್ದರು.