ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟು ಹಬ್ಬ ಆಚರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.19: ದೇಶದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡರ 92ನೇ ವರ್ಷದ ಹುಟ್ಟು ಹಬ್ಬವನ್ನು ತಾಲೂಕು ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಚರಿಸಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭ ಹಾರೈಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ದೀರ್ಘಾಯಸ್ಸು ಕೋರಿ ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ಕೋಟೆ ಬೈರವೇಶ್ವರನಿಗೆ ಶಾಸಕ ಹೆಚ್.ಟಿ ಮಂಜು ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಮುಖಂಡರು ಅನಂತರ ಪಟ್ಟಣದಲ್ಲಿರುವ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಶುಭ ಕೋರಿದರು.
ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಶಾಸಕ ಹೆಚ್.ಟಿ ಮಂಜು ದೇಶ ಕಂಡ ಅಪರೂಪದ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟು ಹಬ್ಬದ ಹಿನ್ನೆಲೆ ತಾಲೂಕು ಸರ್ಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಅವರ ಅಧಿಕಾರದ ಅವಧಿಯ ಕಾಲಘಟ್ಟದಲ್ಲಿ ದೇಶದ ರೈತರು, ಕಾರ್ಮಿಕರು, ಸೇರಿದಂತೆ ದುಡಿಯುವ ಶ್ರಮಿಕ ವರ್ಗದ ಪರವಾಗಿ ಕೆಲಸ ಮಾಡಿರುವ ದೇವೇಗೌಡರು ಸಮಾಜದ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವಂತಹ ಕಾರ್ಯಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ. ದೇಶದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಮಹಿಳೆಯರು ಸೇರಿದಂತೆ ಎಲ್ಲಾ ಶೋಷಿತ ಸಮುದಾಯಗಳಿಗೂ ಸಮಾನತೆಯಿಂದ ಲಾಭ ಸಿಗುವಂತೆ ಮೀಸಲಾತಿ ಯೋಜನೆಯನ್ನು ಜಾರಿಗೆತಂದಿದ್ದಾರೆ. ತಮ್ಮ 92 ರ ಇಳಿ ವಯಸ್ಸಿನಲ್ಲೂ ದೇಶ ಮತ್ತು ರಾಜ್ಯದ ರೈತರ ದೀನ ದಲಿತರ ಬಗ್ಗೆ ಸದಾ ಚಿಂತಿಸುತ್ತಿರುವ ಏಕೈಕ ಅಪರೂಪದ ರಾಜಕಾರಣಿ ಎಂದರೆ ದೇವೇಗೌಡರು. ಇವರ ಸೇವೆ ದೇಶ ಮತ್ತು ರಾಜ್ಯಕ್ಕೆ ಅವಶ್ಯಕತೆ ಇರುವುದರಿಂದ ಅವರಿಗೆ ಭಗವಂತ ಆರೋಗ್ಯ ಮತ್ತು ಆಯಸ್ಸು ನೀಡಲಿ ಎಂದು ಪ್ರಾರ್ಥಿಸಿದ್ದೇವೆಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ತಾಲೂಕು ವೈದ್ಯಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಎಂ.ಡಿ ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ತಾಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಿ.ಎಸ್.ಧನಂಜಯ್ ಕುಮಾರ್, ಹೋಬಳಿ ಘಟಕದ ಅಧ್ಯಕ್ಷರಾದ ಸಂತೆಬಾಚಹಳ್ಳಿ ರವಿಕುಮಾರ್, ಅಕ್ಕಿಹೆಬ್ಬಾಳು ಬಸವಲಿಂಗಪ್ಪ, ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತ್ ಕುಮಾರ್, ಬಲ್ಲೇನಹಳ್ಳಿ ನಂದೀಶ್, ಜೆಡಿಎಸ್ ಎಸ್.ಸಿ ಘಟಕದ ತಾಲೂಕು ಅಧ್ಯಕ್ಷ ಹರಿಹರಪುರ ನರಸಿಂಹ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.