ಶಾಲೆಗೆ ಬಿಇಒ ಭೇಟಿ
ಬಾದಾಮಿ, ಮೇ19: ತಾಲೂಕಿನ ನೀರಬೂದಿಹಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ(ಕೆ.ಪಿ.ಎಸ್)ಗೆ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ವೈ ಕುಂದರಗಿ ಭೇಟಿ ನೀಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಒಂದರಲ್ಲಿ ಸಫಲರಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ತರಗತಿಗಳನ್ನು ವೀಕ್ಷಿಸಿದರು.
ಪ್ರತಿ ವಿದ್ಯಾರ್ಥಿಯ ವಿಷಯದ ಬಗ್ಗೆ ಪರಿಶೀಲನೆ ಮಾಡಿದರು. ಶಿಕ್ಷಕರು ಸಿದ್ಧಪಡಿಸಿದ ಕ್ರಿಯಾಯೋಜನೆ ವೇಳಾಪತ್ರಿಕೆ ಪಾಸಿಂಗ್ ಪ್ಯಾಕೇಜ್ ಪ್ರಶ್ನೆ ಭಂಡಾರ ಪ್ರತಿ ವಿಷಯವಾರು ಕಡತ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಎರಡನೇ ಪರೀಕ್ಷೆಯಲ್ಲಿ ಉತ್ತೀರ್ಣ ಆಗುವುದು ಹೇಗೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕೊನೆಯಲ್ಲಿ ಶಿಕ್ಷಕರ ಸಭೆ ಏರ್ಪಡಿಸಿ ಪ್ರಸ್ತುತ ಎರಡನೇ ಪರೀಕ್ಷೆ ಹಾಗೂ ಮುಂದಿನ ಶೈಕ್ಷಣಿಕ ವರ್ಷದ ಪೂರ್ವ ತಯಾರಿಯನ್ನು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಟ್ಟುಕೊಳ್ಳಲು ಪ್ರೇರೇಪಣೆ ನೀಡಿದರು. ಇದೇ ಸಂದರ್ಭದಲ್ಲಿ ಉಪಪ್ರಾಚಾರ್ಯ ನಾಗರಾಜ ದೇಶಪಾಂಡೆ, ಸಹಶಿಕ್ಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ ರಾವ್ ದೇಸಾಯಿ ಉಪಸ್ಥಿತರಿದ್ದರು.