ಗಾಯಾಳು ಪದವಿ ವಿದ್ಯಾರ್ಥಿ ಜಿಮ್ಸ್ ಆಸ್ಪತ್ರೆಯಲ್ಲಿ ಸಾವು: ಉದ್ರಿಕ್ತರಿಂದ ಪ್ರತಿಭಟನೆ
ಕಲಬುರಗಿ:ಮೇ.18: ದೇವರ ಕಾರ್ಯಕ್ರಮ ಮುಗಿಸಿಕೊಂಡು ಕಳೆದ ಶುಕ್ರವಾರ ರಾತ್ರಿ 10-30 ಸುಮಾರಿಗೆ ದ್ವಿಚಕ್ರವಾಹನದ ಮೇಲೆ ಬರುತ್ತಿರುವಾಗ ರಸ್ತೆ ಅಪಘಾತದಲ್ಲಿ ಧರ್ಮೇಶ್ ಆಲಗೂಡ್ (21) ಎಂಬ ಪದವಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆತನಿಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ವೈದ್ಯರ ನಿರ್ಲಕ್ಷ್ಯದಿಂದ ಆತ ಅಸುನೀಗಿದ್ದಾನೆ ಎಂದು ಆರೋಪಿಸಿ ಉದ್ರಿಕ್ತರು ಶನಿವಾರ ಜಿಮ್ಸ್ ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಅವರು ಆಗಮಿಸಿ, ನೀವು ಪ್ರತಿಭಟನೆ ಮಾಡಬೇಡಿ. ನೀವು ಲಿಖಿತವಾಗಿ ದೂರು ಕೊಡಿ. ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರಿಂದ ಉದ್ರಿಕ್ತರು ತಮ್ಮ ಹೋರಾಟವನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ದಶರಥ್ ಎಂ. ಕಲಗುರ್ತಿ ಅವರು ಮಾತನಾಡಿ, ಕಳೆದ ರಾತ್ರಿ ಶ್ರೀನಿವಾಸ್ ಸರಡಗಿಯಲ್ಲಿ ದೇವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿ ಬರುವಾಗ ಕಾಳನೂರು ಕ್ರಾಸ್ ಹತ್ತಿರ ಅಪಘಾತದಲ್ಲಿ ಗಾಯಗೊಂಡಿದ್ದ ಧರ್ಮೇಶನಿಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಹಾಗೂ ನರ್ಸ್ ಮುಂತಾದ ಸಿಬ್ಬಂದಿಗಳು ಸೂಕ್ತ ಚಿಕಿತ್ಸೆಯನ್ನು ನೀಡಲಿಲ್ಲ. ಗಾಯಾಳುವಿನ ಪರಿಸ್ಥಿತಿ ಗಂಭೀರವಾಗಿದ್ದು, ಆತನಿಗೆ ಬೇರೆ ಆಸ್ಪತ್ರೆಗೆ ದಾಖಲಿಸುತ್ತೇವೆ ಎಂದು ಕುಟುಂಬಸ್ಥರು ಹೇಳಿದರೂ ಸಹ ಹಾಗೇನೂ ಚಿಂತಾಜನಕ ಸ್ಥಿತಿಯಲ್ಲಿ ಇಲ್ಲ. ಏನೂ ಆಗುವುದಿಲ್ಲ ಎಂದು ವೈದ್ಯರು ಹಾಗೂ ಸಿಬ್ಬಂದಿಗಳು ಹೇಳಿದರು. ಆದಾಗ್ಯೂ, ರಾತ್ರಿ ಗಾಯಾಳು ಅಸುನೀಗಿದ್ದು, ಅದಕ್ಕೆ ವೈದ್ಯರು ಹಾಗೂ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ದೂಷಿಸಿದರು.
ಹೋರಾಟದ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಕೊಟ್ಟ ಭರವಸೆಯಂತೆ ನಾವು ಲಿಖಿತವಾಗಿ ದೂರು ಸಲ್ಲಿಸಿದ್ದೇವೆ. ದಿವ್ಯ ನಿರ್ಲಕ್ಷ್ಯ ವಹಿಸಿದ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಕೂಡಲೇ ಅಮಾನತ್ತುಗೊಳಿಸಿ ಕ್ರಮ ಕೈಗೊಳ್ಳಲು ಕೋರಿದ್ದೇವೆ. ಆದಾಗ್ಯೂ, ಸಹಾಯಕ ಪೋಲಿಸ್ ಆಯುಕ್ತರು ನಾವು ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಆ ವರದಿಯ ಆಧಾರದ ಮೇಲೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ನಾವು ನಮ್ಮ ನ್ಯಾಯವಾದಿಗಳೊಂದಿಗೆ ಸಂಪರ್ಕದಲ್ಲಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ಘೋಷಿಸಿದರು.
ಎರಡು ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ದಲಿತ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಮೃತ ವಿದ್ಯಾರ್ಥಿಯ ಮನೆಯ ಪಕ್ಕದ ನಿವಾಸಿ ಹುಸೇನ್ ಭಾಷಾ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಪಕ್ಕದ ಮನೆಯ ಧರ್ಮೇಶ್ ಒಳ್ಳೆಯ ವ್ಯಕ್ತಿ. ಶ್ರೀ ಶರಣಬಸವೇಶ್ವರ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಕಳೆದ ರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ದ್ವಿಚಕ್ರವಾಹನದಲ್ಲಿ ಬರುವಾಗ ಮಾರ್ಗ ಮಧ್ಯೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ನಾವೆಲ್ಲ ಹೋಗಿ ತಕ್ಷಣವೇ ಆಸ್ಪತ್ರೆಗೆ ಸೇರಿಸಲು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಅಂಬುಲೆನ್ಸ್ ಮೂಲಕ ಜಿಮ್ಸ್ ಆಸ್ಪತ್ರೆಗೆ ಸೇರಿಸಿದೆವು. ಆಸ್ಪತ್ರೆಯಲ್ಲಿ ಅಂಬುಲೆನ್ಸ್‍ನಿಂದ ವ್ಹೀಲ್ ಚೆಯರ್‍ನಲ್ಲಿ ಗಾಯಾಳುವನ್ನು ತೆಗೆದುಕೊಂಡು ಹೋಗಲು ಸಿಬ್ಬಂದಿಗಳು ಇರಲಿಲ್ಲ. ನಾವೇ ವ್ಹೀಲ್ ಚೇರ್ ಮೂಲಕ ಆಸ್ಪತ್ರೆಯೊಳಗೆ ಸೇರಿಸಿದೆವು. ವೈದ್ಯರು ಸಹ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿದರು.
ಗಾಯಾಳು ಸಾಕಷ್ಟು ಚೀರಾಟ ಮಾಡಿದರೂ ಸಹ ಗಂಭೀರ ಪರಿಸ್ಥಿತಿ ಇಲ್ಲ ಎಂದು ಒಂದು ಇಂಜೆಕ್ಷನ್ ಹಾಗೂ ಗುಳಿಗೆ ಕೊಟ್ಟರು. ಆದಾಗ್ಯೂ, ಗಾಯಾಳು ನರಳಾಟ ಹೆಚ್ಚಾಯಿತು. ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತೇವೆ ಎಂದರೂ ಸಹ ಪರಿಸ್ಥಿತಿ ಗಂಭೀರವಾಗಿಲ್ಲ ಎಂದೇ ಹೇಳಿದರು. ಹೀಗಾಗಿ ಬಿಟ್ಟೆವು. ರಾತ್ರಿ ಪರಿಸ್ಥಿತಿ ಕೈಮೀರಿದ್ದರಿಂದ ಪರಿಸ್ಥಿತಿ ಹದಗೆಟ್ಟಿದೆ ಎಂದು ತುರ್ತು ನಿಘಾ ಘಟಕಕ್ಕೆ ಕರೆದೊಯ್ದರು. ಆದಾಗ್ಯೂ, ಚಿಕಿತ್ಸೆ ಫಲಿಸಲಿಲ್ಲ. ವೈದ್ಯರು ಮೊದಲೇ ತುರ್ತು ನಿಗಾ ಘಟಕಕ್ಕೆ ತೆಗೆದುಕೊಂಡು ಹೋಗಿದ್ದರೆ ಇಲ್ಲವೇ ಗಾಯಾಳುವನ್ನು ಬೇರೆ ಆಸ್ಪತ್ರೆಗೆ ಸೇರಿಸಲು ಅವಕಾಶ ಕೊಟ್ಟದ್ದರೆ ಗಾಯಾಳು ಬದುಕುತ್ತಿದ್ದರು ಎಂದು ಅವರು ಹೇಳಿದರು.
ಜಿಮ್ಸ್ ಆಸ್ಪತ್ರೆಯಲ್ಲಿ ಬಡವರಿಗೆ ಯಾವುದೇ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಶ್ರೀಮಂತರಿಗೆ ಮತ್ತು ಶಿಫಾರಸ್ಸು ಮಾಡಿದವರಿಗೆ ಮಾತ್ರ ಚಿಕಿತ್ಸೆ ಕೊಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡು ಬಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮೃತ ವ್ಯಕ್ತಿಯ ಅಣ್ಣ ಮಹೇಶ್ ಆಲಗೂಡ್ ಅವರು ಮಾತನಾಡಿ, ನನ್ನ ತಮ್ಮನ ಸಾವಿಗೆ ವೈದ್ಯರು ಹಾಗೂ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ. ಆತನ ಪರಿಸ್ಥಿತಿ ಗಂಭೀರವಾಗಿದೆ. ಬೇರೆ ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇವೆ ಎಂದರೂ ಬಿಟ್ಟುಕೊಡಲಿಲ್ಲ. ಅವರೂ ಸಹ ಸಮರ್ಪಕ ಚಿಕಿತ್ಸೆ ನೀಡಲಿಲ್ಲ. ಇಂತಹ ಸಾವುಗಳು ಜಿಮ್ಸ್ ಆಸ್ಪತ್ರೆಯಲ್ಲಿ ಬಹಳಷ್ಟು ಆಗಿವೆ. ಇಂತಹ ಸಾವುಗಳು ಸಂಭವಿಸಬಾರದು. ಅದಕ್ಕಾಗಿ ಸಂಬಂಧಿಸಿದ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಬೇಕು. ಇಲ್ಲದೇ ಹೋದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.