ರಾಷ್ಟ್ರದ ಅಭಿವೃದ್ಧಿಗೆ ಮ್ಯೂಸಿಯಂಗಳು ಪೂರಕ
ಕಲಬುರಗಿ:ಮೇ.18: ಮ್ಯೂಸಿಯಂಗಳು ನಾಡು, ದೇಶ, ವಿಶ್ವದ ಧಾರ್ಮಿಕ, ಐತಿಹಾಸಿಕ, ಸಾಂಸ್ಕøತಿಕ, ಪಾರಂಪರಿಕ, ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆಯ ಕುರುಹುಗಳು, ಮೌಲ್ಯಗಳನ್ನು ಒಳಗೊಂಡ ವಸ್ತುಗಳನ್ನು ಸಂರಕ್ಷಿಸುವ ಮೂಲಕ ಸಾಕ್ಷಾಧಾರಗಳನ್ನು ಒದಗಿಸಿಕೊಡುತ್ತವೆ. ಅದರ ಅಧ್ಯಯನದ ಆಧಾರದ ಮೇಲೆ ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಹಾಕಿಕೊಳ್ಳಬಹುದಾಗಿದೆ. ಹೀಗಾಗಿ ಮ್ಯೂಸಿಯಂಗಳು ಪರೋಕ್ಷವಾಗಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ‘ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಅಂತಾರಾಷ್ಟ್ರೀಯ ಮ್ಯೂಸಿಯಂ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಕಾಡೆಮಿಯ ನಿರ್ದೇಶಕ ದತ್ತು ಹಡಪದ ಮಾತನಾಡಿ, ವಿಶೇಷವಾಗಿ ವಿದ್ಯಾರ್ಥಿಗಳು ಮ್ಯೂಸಿಯಂಗಳಿಗೆ ಭೇಟಿ ನೀಡಿ, ಅಲ್ಲಿನ ಕಲೆ, ವಸ್ತುಗಳನ್ನು ವೀಕ್ಷಿಸಬೇಕು. ಇದರಿಂದ ನಿಮಗೆ ಸಾಕಷ್ಟು ಜ್ಞಾನ ಲಭ್ಯವಾಗಲು ಸಾಧ್ಯವಾಗುತ್ತದೆ. ಶೈಕ್ಷಣಿಕ ಪ್ರವಾಸವು ಪಠ್ಯ ಪೂರಕ ಮತ್ತು ನಾಡಿನ ಭವ್ಯ ಪರಂಪರೆಯನ್ನು ಬಿಂಬಿಸುವ ಸ್ಥಳಗಳು, ಮ್ಯೂಸಿಯಂಗಳಾಗಿರಬೇಕು. ಇವುಗಳ ಸಂರಕ್ಷಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ವೀಣಾ ಬಿರಾದಾರ, ಅಪೂರ್ವ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.