ಕೊಲೆ ಪಾತಕಿ ವಿರುದ್ಧ ಕಠಿಣ ಕ್ರಮಕ್ಕಾಗಿ ಕೋಲಿ ಸಮಾಜ ಆಗ್ರಹ ಮೇ. 22 ರಂದು ಕಲಬುರಗಿ ನಗರದಲ್ಲಿ ಬೃಹತ್ ಪ್ರತಿಭಟನೆ
ಅಫಜಲಪುರ:ಮೇ.18: ಇತ್ತೀಚೆಗಷ್ಟೇ ರಾಜ್ಯಾದ್ಯಂತ ಸದ್ದು ಮಾಡಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂಥದ್ದೇ ಮತ್ತೊಂದು ಭೀಕರ ಕೊಲೆ ಪ್ರಕರಣ ನಡೆದ ಹಿನ್ನೆಲೆ ತಾಲೂಕಾ ಕೋಲಿ ಸಮಾಜದ ಹಿರಿಯ ಮುಖಂಡರು ತಹಸೀಲ್ದಾರ್ ಸಂಜೀವಕುಮಾರ ದಾಸರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಮಾಜದ ಹಿರಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿದರು.
ಇಂದು ಸಮಾಜದಲ್ಲಿ ಹತ್ಯೆ ಮಾಡಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಧೈರ್ಯ ಬರಲು ರಾಜ್ಯದಲ್ಲಿ ಹದಗೆಟ್ಟ ಸರ್ಕಾರದ ಕಾನೂನು ಸುವ್ಯವಸ್ಥೆಯೇ ಕಾರಣವಾಗಿದೆ. ರಾಜ್ಯದಲ್ಲಿ ಮೇಲಿಂದ ಮೇಲೆ ಇಂತಹ ದುರ್ಘಟನೆಗಳು ನಡೆಯುತ್ತಿರುವುದಕ್ಕೆ ಪ್ರಜ್ನಾವಂತ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಜಲಿ ಕುಟುಂಬಸ್ಥರು ದೂರು ನೀಡಿದ್ದರೂ ಸಹ ಪೆÇೀಲಿಸ್ ಇಲಾಖೆ ನಿರ್ಲಕ್ಷ್ಯ ತೋರಿರುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ. ಆರ್ಥಿಕವಾಗಿ ಬಡ ಕುಟುಂಬವಾಗಿರುವ ಅಂಜಲಿ ಕುಟುಂಬಕ್ಕೆ ಸರ್ಕಾರ ಈ ಕೂಡಲೇ 1 ಕೋಟಿ ರೂಪಾಯಿ ಪರಿಹಾರ ಒದಗಿಸಿ ಮೃತಳ ಸಹೋದರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಹಾಗೂ ಮೇ 22ರಂದು ಕಲಬುರ್ಗಿ ನಗರದಲ್ಲಿ ಅಂಜಲಿ ಹತ್ಯೆ ಖಂಡಿಸಿ ಸಹಸ್ರಾರು ಸಂಖ್ಯೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಈ ಪ್ರತಿಭಟನೆಗೆ ಮಠಾಧೀಶರು ವಿವಿಧ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಪ್ರಜ್ಞಾವಂತ ನಾಗರಿಕರು ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಸರ್ಕಾರದ ಆದ್ಯ ಕರ್ತವ್ಯ. ಹೀಗಾಗಿ ಹಂತಕನಿಗೆ ಕಠಿಣ ಶಿಕ್ಷೆಯಾಗುವಂತೆ ಸೂಕ್ತ ಕ್ರಮ ಜರುಗಿಸಿ ಕಾನೂನು ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಮಹಾರಾಯ ಅಗಸಿ, ಮುಖಂಡರಾದ ಶಂಕರ ಮ್ಯಾಕೇರಿ, ವಿದ್ಯಾಧರ ಮಂಗಳೂರೆ, ಮಹಾಂತೇಶ ತಳವಾರ, ಅಶೋಕ ದುದ್ದಗಿ, ಶ್ರೀಕಾಂತ ದಿವಾಣಜಿ, ಸಂಗಮೇಶ ಹೇರೂರ, ಸಂಜು ಉಕ್ಕಲಿ, ಸಚೀನ ಮ್ಯಾಕೇರಿ, ಶಾಮ ದುದ್ದಗಿ, ಅವದೂತ ಬನ್ನಟ್ಟಿ, ವಿಜಯ ವಡಗೇರಿ, ಸಂತೋಷ ತಳವಾರ, ಭೀಮರಾಯ ಕಲಶೆಟ್ಟಿ, ರುಕ್ಕಪ್ಪ ಬಂಗಿ, ಸಾಗರ ಒಡೆಯರ, ಅಶೋಕ ಪೂಜಾರಿ, ಚಂದ್ರಕಾಂತ ಜಮಾದಾರ, ಹಣಮಂತ ವಾಲೀಕಾರ ಸೇರಿದಂತೆ ಅನೇಕರಿದ್ದರು.