ಆರೋಗ್ಯಯುತ ಜೀವನಶೈಲಿಯಿಂದ ಅಧಿಕ ರಕ್ತದೊತ್ತಡ ದೂರ
ಕಲಬುರಗಿ: ಮೇ.18:ಅನಾರೋಗ್ಯಕರ ಜೀವನಶೈಲಿಯಿಂದ ಬೊಜ್ಜು, ಸ್ಥೂಲಕಾಯದ ಪ್ರಮಾಣ ಹೆಚ್ಚಾಗಿದೆ. ಒತ್ತಡದ ಜೀವನ ಸೇರಿದಂತೆ ಮುಂತಾದ ಕಾರಣದಿಂದ ಅಧಿಕ ರಕ್ತದೊತ್ತಡವಿರುವವರ ಸಂಖ್ಯೆ ಹೆಚ್ಚಾಗುತ್ತಾ ಸಾಗಿದೆ. ಇದು ಉಸಿರಾಟ ಸಂಬಂಧಿತ ಸಮಸ್ಯೆಗಳೊಂದಿಗೆ ಹೃದಯಘಾತಕ್ಕೆ ಕಾರಣವಾಗುವ ಮೂಲಕ ಜೀವಕ್ಕೆ ಅಪಾಯಕಾರಿಯಾಗಿದೆ. ಆರೋಗ್ಯಯುತ ಜೀವನಶೈಲಿಯಿಂದ ಅಧಿಕ ರಕ್ತದೊತ್ತಡದಿಂದ ದೂರವಿರಲು ಸಾಧ್ಯವಿದೆ ಎಂದು ತಜ್ಞ ವೈದ್ಯ ಸಂಜೀವ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಶ್ರೀ ಶರಣ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ’ಯ ಕಾರ್ಯಕ್ರಮವನ್ನು ಬಿಪಿ ಪರೀಕ್ಷಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪೌಷ್ಠಿಕಾಂಶಗಳುಳ್ಳ ಆಹಾರ ಸೇವನೆ, ಶುದ್ಧವಾದ ನೀರನ್ನು ಕುಡಿಯುವುದು, ದಿನಕ್ಕೆ 7-8 ಗಂಟೆಗಳ ಕಾಲ ಗಾಡ ನಿದ್ರೆ, ನಿಯಮಿತವಾಗಿ ವ್ಯಾಯಾಮ, ಯೋಗ ಮಾಡುವುದು, ಸಕಾರಾತ್ಮಕ ಚಿಂತನೆ ಮಾಡುವುದು ಸೇರಿದಂತೆ ಮುಂತಾದ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಹೆಚ್ಚು ಹುಳಿ, ಖಾರ, ಉಪ್ಪು, ಎಣ್ಣೆಯಲ್ಲಿ ಕರಿದ ತಿನುಸುಗಳ ಸೇವೆನೆ ಬೇಡ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡಬೇಡಿ. ಅತಿಯಾದ ಮೋಬೈಲ್ ಬಳಕೆ, ಟಿ.ವಿ.ವೀಕ್ಷಣೆ ಬೇಡ. ಆಗಾಗ್ಗೆ ಬಿಪಿ ಪರೀಕ್ಷೆ ಮಾಡಿಕೊಂಡು ವ್ಯತ್ಯಾಸವಾದರೆ ಜೀವನಶೈಲಿ ಬದಲಾವಣೆಯೊಂದಿಗೆ ಅದರ ಸಮತೋಲನ ನಿರ್ವಹಣೆ ಮಾಡಬೇಕು ಎಂದು ಎಂದು ಕೆಲವು ಪ್ರಮುಖ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ್, ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಪ್ರಮುಖರಾದ ಡಾ.ಆಶಾ ಎಸ್.ಪಾಟೀಲ, ಗಂಧರ್ವ, ಸುರೇಶ್ ಸೇರಿದಂತೆ ಇನ್ನಿತರರಿದ್ದರು.