ವಿದ್ಯಾರ್ಥಿಗಳ ಅನುಕೂಲಕ್ಕೆ ವಿವಿಧ ಕೋರ್ಸುಗಳಿಗೆ ಶೀಘ್ರದಲ್ಲಿಯೇ ಚಾಲನೆ
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮೇ.18: ಪಟ್ಟಣ ಹಾಗೂ ಸುತ್ತಮುತ್ತಲಿನ  ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿಧ ವಿಭಾಗಗಳಲ್ಲಿ ಹೊಸ ಕೋರ್ಸುಗಳು ಹಾಗೂ ಬಾಲಕಿಯರ ಹಾಸ್ಟಲ್‌‌ನ್ನು ಶೀಘ್ರದಲ್ಲಿ ಪ್ರಾರಂಭಿಸುವುದಕ್ಕೆರೂಪುರೇಷೆಯನ್ನು ತಯಾರಿಸಲಾಗುವುದು ಎಂದು  ಹ.ಬೊ.ಹಳ್ಳಿ ಶಾಸಕ ನೇಮರಾಜನಾಯ್ಕ್ ಭರವಸೆ ವ್ಯಕ್ತಪಡಿಸಿದರು.
ಅವರು ಪಟ್ಟಣದ ತಾಂಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಪಟ್ಟಣದ ಸ.ಪ.ಪೂ.ಕಾಲೇಜಿಗೆ‌ ಪಿ.ಯು.ಸಿ.ವಿಭಾಗಕ್ಕೆ ವಿಜ್ಞಾನ, ಸರ್ಕಾರಿ ಐ.ಟಿ.ಐ ಹಾಗೂ ಬಾಲಕಿಯರ ಹಾಸ್ಟೆಲ್‌,  ಜಿ.ಟಿ.ಟಿ.ಸಿ. ಕಾಲೇಜಿಗೆ ಸ್ಥಳೀಯ ಕಾರ್ಖಾನೆಗಳಲ್ಲಿ ಉದ್ಯೋಗಗಳಿಗೆ ಅನುಕೂಲವಾಗುವಂತೆ ಹೊಸ ಕೋರ್ಸುಗಳನ್ನು ನನ್ನ ಅವಧಿಯಲ್ಲೇ ಮಂಜೂರು ಮಾಡಿಸುವೆ ಎಂದರು.
ಪಟ್ಟಣಕ್ಕೆ ಜಲಾಶಯ ಕೂಗಳತೆಯಲ್ಲಿದ್ದರೂ ನೀರಿನ ಹಾಹಾಕಾರ ಇರುವುದು ದುರದೃಷ್ಟಕರ. ಅಂದಿನ ಜನಸಂಖ್ಯೆಗೆ ಅನುಗುಣವಾಗಿ 2008ರಲ್ಲಿ ತುಂಗಭದ್ರ ಜಲಾಶಯದಿಂದ ಪಟ್ಟಣಕ್ಕೆ ನೀರು ಪೂರೈಸುವ ಯೋಜನೆ ಜಾರಿಗೆ ತರಲಾಗಿತ್ತು, ಈಗ ಮುಂದಿನ 50 ವರ್ಷಗಳಿಗೆ ಯೋಜಿಸಿ ರೂಪಿಸಿರುವ ಅಮೃತ್-02 ಯೋಜನೆಯ ಓ.ಹೆಚ್.ಟಿ.ಗಳು, ಶುದ್ದಿಕರಣ ಘಟಕದ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ ಎಂದರು.
ಅಮೃತ್-02 ಯೋಜನೆಯ ಪೈಪ್ ಲೈನ್ ಕಾಮಗಾರಿ ವೇಗವಾಗಿ ಪ್ರಗತಿಯಲ್ಲಿದ್ದು,  ಪಟ್ಟಣದ 18 ವಾರ್ಡ್‌ಗಳಿಗೂ ಶೀಘ್ರದಲ್ಲಿಯೇ ನೀರು ಪೂರೈಸಲಿದ್ದೇವೆ ಎಂದರು.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ನಂತರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕ್ಷೇತ್ರದಲ್ಲಿ ಈಗಾಗಲೇ ಹಲವು ಶಾಲೆಗಳಿಗೆ 24 ಕಂಪ್ಯೂಟರ್ ಲ್ಯಾಬ್ ನೀಡಲಾಗಿದ್ದು, ಮುಂದೆ 48 ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್ ನೀಡಲಿದ್ದೇವೆ. ಇದರಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಸ್ಥಳೀಯ ಭಾಗದ ಅಂತರ್ಜಲ‌ಮಟ್ಟ‌ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿ, ಕಾಲುವೆ, ಕೆರೆಗಳ ಗೇಟ್ ದುರಸ್ತಿಯ ಟೆಂಡ‌ರ್ ಕಾರ್ಯ ಪ್ರಕ್ರಿಯೆಯಲ್ಲಿದೆ. ಅಲ್ಲದೆ ಡಣಾಪುರ, ಡಣಾಯಕನಕೆರೆ ಮಾಗಾಣಿರಸ್ತೆ, ಅಯ್ಯನಹಳ್ಳಿ-ಮರಿಯಮ್ಮನಹಳ್ಳಿ- ಲೋಕಪ್ಪನ ಹೊಲ ರಸ್ತೆ, ಡಣಾಪುರ-ವೆಂಕಟಾಪುರ ರಸ್ತೆ, ಗೊಲ್ಲರಹಳ್ಳಿಯಿಂದ ಯಶವಂತನಗರ ರಸ್ತೆಗಳ ಅಭಿವೃದ್ಧಿಗೂ ರೂಪುರೇಷೆಗಳನ್ನು ಮಾಡಿದ್ದು ಅವುಗಳಿಗೂ ಚುನವಣೆ ನೀತಿ ಸಂಹಿತೆಯ ಬಳಿಕ ಚಾಲನೆ ನೀಡಲಾಗುವುದೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬದಾಮಿ ಮೃತ್ಯುಂಜಯ,
ಪ್ರಕಾಶನಾಯ್, ಸೀತ್ಯಾನಾಯ್ಕ, ರವೀಂದ್ರನಾಯ್ಕ, ರವಿನಾಯ್ಕ, ಹನುಮನಾಯ್ಕ, ಢಾಕ್ಯಾನಾಯ್ಕ, ಗಿರಿಯನಾಯ್, ರಾಮನಾಯ್ಕ, ಹೇಮ್ಲಾನಾಯ್ಕ್ ಹಾಗೂ ಇತರರು ಇದ್ದರು.