ವೈಚಾರಿಕ ಕ್ರಾಂತಿಗೆ ನಾಂದಿಯಾಡಿದ್ದ ಲಿಂಗೈಕ್ಯ ಶಿವಕುಮಾರ ಶ್ರೀ
ಸಂಜೆವಾಣಿ ವಾರ್ತೆ
ಚನ್ನಗಿರಿ. ಸೆ.೨೩; ಸಿರಿಗೆರೆಯ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಗುರುಗಳು ಆಗಿನ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ,ಜನಸಾಮಾನ್ಯರ ಅರಿವಿನ ಒಳಗಣ್ಣುಗಳನ್ನು ತೆರೆಸಲು ವಿವಾಹ , ಶಿವಗಣಾರಾಧನೆ, ಗೃಹ ಪ್ರವೇಶದಂತಹ  ಕಾರ್ಯಕ್ರಮಗಳಲ್ಲಿ ಸರ್ವ ಶರಣ ಸಮ್ಮೇಳನವನ್ನು ಸಂಘಟಿಸಿ , ನಾಡಿನಾದ್ಯಂತ ಅಕ್ಕನ ಬಳಗ, ಅಣ್ಣನ ಬಳಗ , ತರಳಬಾಳು ಕಲಾ ಸಂಘದ ಮೂಲಕ  ಹಾಗೂ  ತರಳಬಾಳು ಹುಣ್ಣಿಮೆಯಂತಹ ವೈಚಾರಿಕ ನೆಲೆಗಟ್ಟಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ  ಜೊತೆಗೆ ವಿಶ್ವಬಂಧು ಮರುಳಸಿದ್ದರ ಚಿಂತನೆ, ಬಸವಣ್ಣನವರ ತತ್ವ ಸಿದ್ದಾಂತಗಳ ತಳಹದಿಯಲ್ಲಿ ಶರಣರ ಆಶಯಗಳನ್ನು ಈಡೇರಿಸುವ ಮಹತ್ಕಾರ್ಯಗಳನ್ನು ಮಾಡಿ ವೈಚಾರಿಕ ಕ್ರಾಂತಿಗೆ ನಾಂದಿಯಾಡಿದ್ದರು ಎಂದು ಚನ್ನಗಿರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಬಣ್ಣಿಸಿದರು.ಅವರು ತಾಲ್ಲೂಕಿನ ಬಸವಾಪಟ್ಟಣದ ಎಲ್.ಸಿದ್ದಪ್ಪ ಪದವಿಪೂರ್ವ ಕಾಲೇಜು ಮತ್ತು ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಶನಿವಾರದಂದು ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 32 ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಗುರುಗಳು ದೀನದಲಿತರ ಬಗ್ಗೆ ಅನುಕಂಪ ಹೊಂದಿ, ಸರ್ವರಿಗೂ ಸಮಬಾಳು- ಸಮಪಾಲು ತತ್ವದ ಚಿಂತಕರಾಗಿ,ಸ್ವಾತಂತ್ಯ್ರ ಪೂರ್ವದಲ್ಲೇ ಸಮಾನ ಶಿಕ್ಷಣ , ಸಹಪಂಕ್ತಿ ಭೋಜನದ ವ್ಯವಸ್ಥೆಯನ್ನು ಮಾಡಿ , ವಿದ್ಯಾಸಂಸ್ಥೆಯನ್ನು  ಸ್ಥಾಪಿಸಿ ಸರಿಯಾದ ವಿದ್ಯುತ್- ರಸ್ತೆ ಸಂಪರ್ಕವಿಲ್ಲದ ನಾಡಿನ ನೂರಾರು ಕುಗ್ರಾಮಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆದು ಹಳ್ಳಿ ಮಕ್ಕಳ ಬಾಳನ್ನು ಹಸನುಗೊಳಿಸುವುದರ ಜೊತೆಗೆ ಕಲೆ-ಸಾಹಿತ್ಯ-ನಾಟಕ-ಸಂಸ್ಕೃತಿಯ ಪ್ರಸರಣೆಗಳಿಗೆ ಪ್ರಾಮುಖ್ಯತೆ ನೀಡಿ ಶರಣ ಸಂಸ್ಕೃತಿಯ ಸಾಕಾರ ರೂಪವಾಗಿದ್ದರು ಎಂದರು.ದುಗ್ಗಾಣಿ ಮಠವಾಗಿದ್ದ ಸಿರಿಗೆರೆಯ ಮಠದ ಅಭ್ಯುದಯಕ್ಕಾಗಿ ತಮ್ಮ ಕಾಯಕ ನಿಷ್ಠೆ, ದೂರ ದರ್ಶಿತ್ವ, ಸಂಘಟನಾ ಶಕ್ತಿ, ನೇರ ನಿಷ್ಠುರ ನುಡಿ ಹಾಗೂ ದಿಟ್ಟ ಹೆಜ್ಜೆಗಳಿಂದ ದುಡಿಯುವ ಮಠವನ್ನಾಗಿ ಮಾಡಿ ,ಶಿಷ್ಯರು- ಮಠದ ನಡುವೆ ಮಧುರ ಬಾಂಧವ್ಯವನ್ನು ಕಲ್ಪಿಸಿ, ಮಠಕ್ಕೆ ನಾನೇನು ಮಾಡಿದೆ ಎಂದು ಯೋಚಿಸುವ ಸಮರ್ಪಣಾ ಭಾವದ ಭಕ್ತರನ್ನು ರೂಪಿಸಿದ ಕೀರ್ತಿ ಲಿಂಗೈಕ್ಯ ಶಿವಕುಮಾರ ಗುರುಗಳಿಗೆ ಸಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟರು.ಕಾರ್ಯಕ್ರಮದಲ್ಲಿ ಕಾಲೇಜಿನ ಸಲಾಹಾ ಸಮಿತಿಯ ಸದಸ್ಯರಾದ  ಬಿ.ಜಿ.ನಾಗರಾಜ್, ಎಂ.ಜಿ.ಜಯದೇವಪ್ಪ, ಜಿ.ಬಿ.ಜಗನ್ನಾಥ್, ಬಿ.ಶಿವಮೂರ್ತಿ ಇದ್ದರು.ಕಾಲೇಜಿನ ಪ್ರಾಂಶುಪಾಲ ಡಾ.ಪದ್ಮಪ್ಪ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕರಾದ ರಮೇಶ್‌ಕುಮಾರ್, ಸವಿತಾ ಎಂ.ಅಂಚಿ, ಮುಖ್ಯಶಿಕ್ಷಕ ಎಂ.ಶ್ರೀಧರರಾವ್ ಮತ್ತಿತರರು ಇದ್ದರು.