ಪಕ್ಷದ ಗೆಲುವು ಕಾರ್ಯಕರ್ತರ ಮೇಲಿದೆ ನೀವಿಲ್ಲದಿದ್ದರೆ ನಾವಿಲ್ಲ; ಎಸ್ ಎಸ್ ಮಲ್ಲಿಕಾರ್ಜುನ್
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೩; ಜಿಲ್ಲೆಯ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದೀರಿ. ಅದನ್ನು ಉಳಿಸಿಕೊಳ್ಳುತ್ತೇವೆ ಎಂಬ ಕೃತಜ್ಞತಾ ನುಡಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನುಡಿದರು.ನಗರದ ಬಾಪೂಜಿ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಂ 57 ನೇ ಜನ್ಮದಿನ ಸಂಭ್ರಮಾಚರಣೆ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಗೆ ಸಂಸದರಿಂದ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪಕ್ಷದ ವರಿಷ್ಠರು ಪ್ರಭಾ ಅವರನ್ನು ಸಂಸದ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿದಾಗ ಬೂತ್ ಮಟ್ಟದಿಂದಲೂ ಪಕ್ಷದ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ಶ್ರಮಪಟ್ಟು ಕಾರ್ಯನಿರ್ವಹಿಸಿ, ಗೆಲ್ಲಿಸಿದ್ದೀರಿ ಧನ್ಯವಾದಗಳು. ಇದು ಮುಗಿಯಿತು. ಇನ್ನು ಮೇಲೆಯೇ ಇರೋದು ಜವಾಬ್ದಾರಿ. ಮುಂದೆ ತಾಲ್ಲೂಕು, ಜಿಲ್ಲಾ ಪಂಚಾಯತ್ ಹಾಗೂ ಪಾಲಿಕೆ ಚುನಾವಣೆಗಳು ಬರಲಿದ್ದು, ಪಕ್ಷದ ಗೆಲುವು ಕಾರ್ಯಕರ್ತರ ಮೇಲಿದೆ. ನೀವಿಲ್ಲದಿದ್ದರೆ ನಾವಿಲ್ಲ. ನಿಮ್ಮ ವಿಶ್ವಾಸ ಬಹಳ ಮುಖ್ಯ ಎಂದು ಅಭಿಮಾನದ ನುಡಿಗಳನ್ನಾಡಿದರು.ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಅಸೆಂಬ್ಲಿ ಚುನಾವಣೆ ಎಂದರೆ ಒಂದು ತಾಲ್ಲೂಕು ಬರುತ್ತದೆ., ಸಂಸತ್ತಿನ ಚುನಾವಣೆ ಎಂದರೆ, ಜಿಲ್ಲೆಯ 8 ತಾಲ್ಲೂಕುಗಳು ಬರುತ್ತದೆ. ಸಂಸತ್ತಿಗೆ ಆಯ್ಕೆಯಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ ಕಲಾಪದ  ಮೊದಲ ದಿನವೇ ತಮ್ಮ ಕ್ಷೇತ್ರ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹಿಂದಿನ ಸಂಸದರು 5 ವರ್ಷವಾದರೂ ಬಾಯ್ಬಿಟ್ಟಿರಲಿಲ್ಲ. ಮಾತೆತ್ತಿದರೆ ಲೆಟರ್ ಬರೆದಿದ್ದೇನೆ ಎನ್ನುತ್ತಿದ್ದರು. ನೀವೆಲ್ಲ ಸೇರಿ ಇತಿಹಾಸ ಬದಲಿಸುವ ಸಂಸದರನ್ನು ಆರಿಸಿದ್ದೀರಿ ಎಂದರು.ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಜಿಲ್ಲೆಯಲ್ಲಿ 25 ವರ್ಷಗಳ ನಂತರ ಕಾಂಗ್ರೆಸ್ ಬಾವುಟ ಹಾರಿಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ಮುಂದಿನ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವನ್ನೇ ಗೆಲ್ಲಿಸಿರಿ. ಅಪ್ಪಾಜಿಯವರು ಹಾಗೂ, ಮಲ್ಲಿಕಾರ್ಜುನ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಅವರ ಪ್ರೋತ್ಸಾಹ ನನ್ನ ಗೆಲುವಿಗೆ ಕಾರಣವಾಯಿತು. ಜಿಲ್ಲೆಯನ್ನು ಕಾಂಗ್ರೆಸ್ ನ ಭದ್ರಕೋಟೆಯನ್ನಾಗಿಸುವತ್ತ ನಮ್ಮ ಚಿತ್ತ ಹರಿಸಬೇಕಿದೆ ಎಂದು ಕಿವಿಮಾತು ಹೇಳಿದರಲ್ಲದೆ, ತಾವು ಮಾಡುತ್ತಿರುವ ಕೆಲಸಗಳು ಹಾಗೂ ಮಾಡಬೇಕಿರುವ ಕಾರ್ಯಗಳ ಕುರಿತು ವಿವರಿಸಿದರು.ವೇದಿಕೆ ಅಧ್ಯಕ್ಷತೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ವಹಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಶಾಸಕರಾದ ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ಶಾಂತನಗೌಡ, ಮೇಯರ್ ವಿನಾಯಕ ಪೈಲ್ವಾನ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಶಾಸಕ ಎಸ್. ರಾಮಪ್ಪ, ಮುಖಂಡರಾದ ಎನ್.ಜಿ. ಪುಟ್ಟಸ್ವಾಮಿ, ಡಿ. ಬಸವರಾಜ್, ಕೆ.ಜಿ. ಶಿವಕುಮಾರ್, ಗಡಿಗುಡಾಳ್ ಮಂಜುನಾಥ್,  ಅಬ್ದುಲ್ ಜಬ್ಬಾರ್, ಅಯೂಬ್ ಪೈಲ್ವಾನ್, ನಿಖಿಲ್ ಕೊಂಡಜ್ಜಿ, ಅನಿತಾ ಮಾಲತೇಶ್ ಜಾಧವ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.ಕಾಂಗ್ರೆಸ್ ಮುಖಂಡರಾದ ಎಸ್ .ಮಲ್ಲಿಕಾರ್ಜುನ್ ನಿರೂಪಿಸಿದರು.