ಉದ್ಯೋಗಿಗಳ ವಜಾ ಖಂಡಿಸಿ ಪ್ರತಿಭಟನೆ
ಬೆಂಗಳೂರು,ಸೆ.೨೩-ಸುಮಾರು ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ೧೯೧ ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿರುವುದನ್ನು ಖಂಡಿಸಿ ಸಾರ್ವಜನಿಕ ವಲಯದ ಎಸ್ ಜೆಎಸ್ ಕಂಪನಿಯ ನೌಕರರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಕಳೆದ ಸೆ.೩ರಿಂದ ಹೊಸೂರು ಬಳಿಯ ಸ್ಥಾವರದಲ್ಲಿ ನೌಕರರು ಸರಣಿ ಉಪವಾಸ ಸತ್ಯಾಗ್ರಹ ನಡೆಸಿದ್ದು,೧೯೧ ಪ್ರಾಮಾಣಿಕ ಉದ್ಯೋಗಿಗಳನ್ನು ಕಾನೂನುಬಾಹಿರವಾಗಿ ವಜಾಗೊಳಿಸುವುದನ್ನು ಕೂಡಲೇ ವಾಪಾಸು ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ನಿಷ್ಠಾವಂತ ಉದ್ಯೋಗಿಗಳು ೨೦ ವರ್ಷಗಳಿಗಿಂತ ಹೆಚ್ಚು ಕಾಲ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,ಕಾನೂನುಬಾಹಿರವಾಗಿ ವಜಾಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಎಸ್ ಜೆಎಸ್ ಎಂಟರ್ಪ್ರೈಸಸ್ ಲಿಮಿಟೆಡ್ ಕಾರ್ಮಿಕರ ಒಕ್ಕೂಟದಿಂದ ಕರೆ ನೀಡಿರುವ ಸತ್ಯಾಗ್ರಹದಲ್ಲಿ ಮಾತನಾಡಿದ ನೌಕರರು ಸೆಬಿ ನಿಯಮಗಳ ಉಲ್ಲಂಘನೆ ಮಾಡಿ ವಜಾ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.
ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ನಿರಂತರ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಕಳೆದ ೩ ವರ್ಷಗಳಿಂದ ನೌಕರರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಸಂಸ್ಕೃತಿ ನಿರಂತರವಾಗಿ ನಡೆಯುತ್ತಿದೆ ಎಂದು ದೂರಿದರು.ಕಳೆದ ಸೆ.೩ ರಿಂದ ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಕಂಪನಿಯ ಆಡಳಿತ ಮಂಡಳಿಯು ಕಿವಿಗೊಡುತ್ತಿಲ್ಲ ಕಾರ್ಮಿಕರ ಆರೋಗ್ಯ ರಕ್ಷಣೆಯ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ ಅಥವಾ ಕಾಳಜಿ ವಹಿಸುತ್ತಿಲ್ಲ. ನೌಕರರಿಂದ ಪದೇ ಪದೇ ವಿನಂತಿಗಳ ಹೊರತಾಗಿಯೂ, ಅವರ ಸಮಸ್ಯೆಗಳನ್ನು ಕಂಪನಿಯು ಕಡೆಗಣಿಸುತ್ತಿದೆ ಎಂದು ಹೇಳಿದರು.
ವಜಾಗೊಳಿಸಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವವರೆಗೆ ಸತ್ಯಾಗ್ರಹವನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.