ಸಮೃದ್ಧ ಬಾಳಿಗೆ ರೇಣುಕಾಚಾರ್ಯರ ಚಿಂತನಗಳು ದಾರಿದೀಪ

ಸಂಜೆವಾಣಿ ವಾರ್ತೆ
ಕಾಳಗಿ- ಮೇ.೧೮; ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಅರಿವು ಆದರ್ಶಗಳ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಜೀವನ ಉನ್ನತಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನಗಳು ಸಕಲರ ಬಾಳಿಗೂ ದಾರಿದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಕಾಳಗಿ ಶ್ರೀ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಬಾಳಿನ ಭಾಗ್ಯೋದಯಕ್ಕೆ ಧರ್ಮವೇ ದಿಕ್ಸೂಚಿ. ಧರ್ಮದ ದಾರಿ ಮೀರಿ ನಡೆದರೆ ಅಪಾಯ ತಪ್ಪಿದ್ದಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಅವರದು. ನೊಂದವರ ಬೆಂದವರ ಧ್ವನಿಯಾಗಿ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾçಂತಿಗೈದು ಜನ ಕಲ್ಯಾಣವನ್ನು ಉಂಟು ಮಾಡಿದ್ದನ್ನು ಮರೆಯಲಾಗದು. ಅಸ್ಪೃಶ್ಯರ ಉದ್ಧಾರ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರö್ಯ ರೈತ ಸಮುದಾಯದ ಹಿತಕ್ಕಾಗಿ ಸದಾ ಶ್ರಮಿಸಿ ಜೀವ ಸಂಕುಲವನ್ನು ಸಂರಕ್ಷಿಸಿದ್ದಾರೆ. ದೇಶಕ್ಕೊಂದು ಸಂವಿಧಾನ ಇರುವಂತೆ ಧರ್ಮಕ್ಕೊಂದು ನೀತಿ ಸಂಹಿತೆಯಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ÷್ಥಲಗಳು ಜೀವನದ ಉನ್ನತಿಗೆ ಅಡಿಪಾಯವಾಗಿವೆ. ಅಂಥ ತತ್ವ ಸಿದ್ಧಾಂತಗಳನ್ನು ಅರಿತು ಬಾಳುವುದರಲ್ಲಿ ಮಾನವನ ಶ್ರೇಯಸ್ಸಿದೆ. ಕಾಳಗಿ ತಾಲೂಕಾ ಕೇಂದ್ರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಭಕ್ತಿ ಶ್ರದೆಯಿಂದ ಭವ್ಯ ಸಮಾರಂಭ ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದರು.ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರಿಗೂ ಧರ್ಮ ಬೇಕಾಗಿದೆ. ಅಶಾಂತಿ ಅಜ್ಞಾನದಿಂದ ತತ್ತರಿಸುತ್ತಿರುವ ಜನ ಸಮುದಾಯಕ್ಕೆ ಧರ್ಮವೊಂದೇ ಆಶಾಕಿರಣ. ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಅನ್ವಯವಾಗುತ್ತವೆ ಎಂದರು. ನೇತೃತ್ವ ವಹಿಸಿದ ಹೊನ್ನಕಿರಣಗಿ ಚಂದ್ರಗುAಡ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಾಳಗಿ ಪಟ್ಟಣದ ಇತಿಹಾಸದಲ್ಲಿ ಇದು ಅವಿಸ್ಮರಣೀವಾದ ಸಮಾರಂಭ. ಪ್ರಪ್ರಥಮವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಆಗಮಿಸಿರುವುದು ಈ ಭಾಗದ ಭಕ್ತರ ಸೌಭಾಗ್ಯವೆಂದರು.