ಅನುಮತಿ ಇಲ್ಲದೆ ಕೆರೆ ಹೂಳು ತೆಗೆದರೆ ಕಾನೂನು ಕ್ರಮ : ಜಿಲ್ಲಾಧಿಕಾರಿ

ಸಂಜೆವಾಣಿ ವಾರ್ತೆ
ಶಿವಮಗ್ಗ, ಮೇ ೧೮: ಖಾಸಗಿ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಕೆರೆಯ ಹೋಳು ಹಾಗೂ ಮಣ್ಣನ್ನು ಸೂಕ್ತ ಪ್ರಾಧಿಕಾರದ ಅನುಮತಿ ಇಲ್ಲದೆ ತೆಗೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಕೆರೆ ಹೂಳು ಹಾಗೂ ಮಣ್ಣಿನ ಅನಧಿಕೃತ ಸಾಗಾಣಿಕೆ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸುವುದಾಗಿ ಸೂಚಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ-ಖಾಸಗಿ ಕಾಮಗಾರಿಗಳಿಗೆ,  ಕೆರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಇತರೆ ಕೆರೆಯ ಹೂಳು ಎತ್ತುವಳಿ ಕಾಮಗಾರಿಗಳಿಗೆ  ಕೆರೆಯ ಮಣ್ಣನ್ನು ಉಪಯೋಗಿಸಲು ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳಾದ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ,  ಗ್ರಾಮ ಪಂಚಾಯತ್‌ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು.  ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳು ಅರ್ಜಿಯನ್ನು ಪರಿಶೀಲಿಸಿ, ಕೆರೆ ಪ್ರದೇಶದಲ್ಲಿ ಎತ್ತುವಳಿ ಮಾಡಬಹುದಾದ ಹೂಳು/ಮಣ್ಣಿನ ಅಂದಾಜು ಪಟ್ಟಿ ತಯಾರಿಸಿ,  ಕೆರೆಯ ಯಾವ ಭಾಗದಲ್ಲಿ ಹೂಳು/ಮಣ್ಣನ್ನು ಎತ್ತುವಳಿ ಮಾಡತಕ್ಕದ್ದು ಎಂಬ ನಕಾಶೆ ಉಳ್ಳ ವಿಸ್ತೃತ ಯೋಜನಾ ವರದಿಯೊಂದಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರವಾನಿಸುತ್ತವೆ.ಗ್ರಾಮ ಪಂಚಾಯಿತಿಯ ಪ್ರಾಧಿಕಾರ ಉಳ್ಳ ಕೆರೆಗಳಲ್ಲಿ ಹೂಳು/ಮಣ್ಣು ತೆಗೆಯಲು ಅನುಮತಿ ಕೋರಿದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅನುಮೋದನೆ ಹಾಗೂ ಸಕ್ಷಮ ಪ್ರಾಧಿಕಾರಿಗಳಿಂದ ಡಿ.ಪಿ.ಆರ್.‌ ತಯಾರಿಸಿಕೊಂಡು ಪ್ರಸ್ತಾವನೆಯನ್ನು ಗಣಿ, ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಬೇಕು. ಸೂಕ್ತ ತೀರುವಳಿಗಳು ಹಾಗೂ ದಾಖಲಾತಿಗಳೊಂದಿಗೆ ಸ್ವೀಕೃತಗೊಂಡ ಪ್ರಸ್ತಾವನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರಿಶೀಲಿಸಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994, ತಿದ್ದುಪಡಿ ನಿಯಮಗಳು 2023 ರಂತೆ ಸರ್ಕಾರಕ್ಕೆ ಪಾವತಿಸಬೇಕಾದ ರಾಜಧನ ಮತ್ತು ಇನ್ನಿತರೆ ಶುಲ್ಕಗಳನ್ನು ನಿಗಧಿಪಡಿಸಿ, ಕಾರ್ಯಾದೇಶ ನೀಡಿ, ಕಾರ್ಯಾದೇಶವನ್ನು ಐ.ಎಲ್.ಎಂ.ಎಸ್.‌ ತಂತ್ರಾಂಶದಲ್ಲಿ ನೋಂದಣಿ ಮಾಡಿ ಮಣ್ಣು ಸಾಗಾಣಿಕೆ ಮಾಡಲು ಖನಿಜ ಸಾಗಾಣಿಕೆ ಪರವಾನಿಗೆ ವಿತರಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.