ಹೆಗಡೆನಗರಕ್ಕೆ ಮತ್ತೆ ಮರಳಿದ ಕುಟುಂಬಗಳು

ಸಂಜೆವಾಣಿ ವಾರ್ತೆ
ದಾವಣಗೆರೆ, ಮೇ.18;ಮಳೆ, ಗುಡುಗು, ಮಿಂಚು, ಸಿಡಿಲಿನ ಆರ್ಭಟ ಜೊತೆಗೆ ಜೋರಾಗಿ ಬೀಸಿದ ಗಾಳಿಯಿಂದಾಗಿ ತಗಡಿನ ತಾತ್ಕಾಲಿಕ ಶೀಟುಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ರಾಮಕೃಷ್ಣ ಹೆಗಡೆನಗರದ ನೂರಾರು ಸಂತ್ರಸ್ಥ ಕುಟುಂಬಗಳು ಸಾಮಾನು, ಸರಂಜಾಮು ಸಮೇತ ಇಲ್ಲಿನ ವರ್ತುಲ ರಸ್ತೆಯ ಹೆಗಡೆ ನಗರದ ಮೂಲ ಸ್ಥಳಕ್ಕೆ ಮರಳಿವೆ.ನಗರ, ಜಿಲ್ಲೆಯಾದ್ಯಂತ ವಿವಿಧೆಡೆ ಮಳೆ ಬಿಟ್ಟು ಬಿಡದೇ ಸುರಿದಿದ್ದು, ಆಗಾಗ ಮಿಂಚು, ಗುಡುಗು, ಸಿಡಿಲಿನ ಆರ್ಭಟದ ಮಧ್ಯೆ ಜೋರು ಗಾಳಿಯಿಂದಾಗಿ ಹೆಗಡೆ ನಗರ ನಿವಾಸಿಗಳು ತಮ್ಮನ್ನು ಸ್ಥಳಾಂತರಿಸಿದ್ದ ಸ್ಥಳದಲ್ಲಿ ರಾತ್ರಿ ಇಡೀ ತೀವ್ರ ಸಂಕಷ್ಟ ಅನುಭವಿಸಿದರು. ವಿದ್ಯುತ್ ಕಂಬಗಳು ಧರೆಗುರುಳಿ, ಶೀಟುಗಳು ಕಿತ್ತು ಹೋಗಿದ್ದರಿಂದಾಗಿ ದಿಕ್ಕು ತೋಚದಂತಾದ ಹಲವಾರು ಕುಟುಂಬ ರಾತ್ರೋರಾತ್ರಿ ಹೆಗಡೆ ನಗರಕ್ಕೆ ಮರಳಿವೆ.ಐದು ತಿಂಗಳ ಹಿಂದೆ ಜಿಲ್ಲಾಡಳಿತ, ನಗರ ಪಾಲಿಕೆಯಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಇಲ್ಲಿನ ವರ್ತುಲ ರಸ್ತೆಯ ಹೆಗಡೆ ನಗರದ ನಿವಾಸಿಗಳು ಜಿಲ್ಲಾ ಕೇಂದ್ರದಿಂದ ಏಳೆಂಟು ಕಿಮೀ ದೂರದ ಪ್ರದೇಶಕ್ಕೆ ಸ್ಥಳಾಂತರಿಸಿದ್ದವು. ಅಲ್ಲಿ ಮನೆ ಕಟ್ಟಿಕೊಡುವವರೆಗೆ ತಾತ್ಕಾಲಿಕವಾಗಿ ತಗಡಿನ ಶೆಡ್‌ಗಳನ್ನು ನಿರ್ಮಿಸಿ, ಸಂತ್ರಸ್ಥರಿಗೆ ಉಳಿಯಲು ವ್ಯವಸ್ಥೆ ಮಾಡಿದ್ದವು. ಬೇಸಿಗೆಯಲ್ಲಿ ಉರಿಬಿಸಿಲಿನಲ್ಲೂ ಜೀವನ ನಡೆಸಿದ್ದ ಸಂತ್ರಸ್ಥರು ಗುರುವಾರ ಸಂಜೆಯಿಂದ ಶುರುವಾದ ಮಳೆಯಿಂದಾಗಿ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತ ಸ್ಥಿತಿ ತಲುಪಿದ್ದೇವೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡರು.ಕಳೆದ 4 ದಶಕದಿಂದಲೂ ಹೆಗಡೆ ನಗರದಲ್ಲಿ ನೆರಕೆ ಗೋಡೆ, ಮಣ್ಣಿನ ಪುಟ್ಟ ಗೂಡು ಕಟ್ಟಿಕೊಂಡು ಜೀವನ ನಡೆಸಿದ್ದೆವು. 5 ತಿಂಗಳ ಹಿಂದೆ ಏಕಾಏಕಿ ಅಲ್ಲಿಂದ ಎಲ್ಲರನ್ನೂ ಒಕ್ಕಲೆಬ್ಬಿಸಿ, ಈ ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಸ್ಥಳಾಂತರಿಸಿದರು. ಈವರೆಗೆ ನಮಗೆ ಇಲ್ಲಿ ಶುದ್ಧ ನೀರು, ಶೌಚಾಲಯ, ಸಾರಿಗೆ, ಆರೋಗ್ಯ ವ್ಯವಸ್ಥೆ, ಮಕ್ಕಳ ಶಿಕ್ಷಣ, ಪಡಿತರ ವ್ಯವಸ್ಥೆ ಹೀಗೆ ಯಾವುದೇ ಮೂಲ ಸೌಕರ್ಯ ನೀಡದೇ ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ. ಸುಮಾರು 500 ಕುಟುಂಬಗಳ ಜೀವನವೇ ಅತಂತ್ರವಾಗಿದೆ. ನಾವು ಯಾರ ಬಳಿ ನಮ್ಮ ದುಃಖ ದುಮ್ಮಾನ ಹೇಳಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದರು.2-3 ದಿನದಿಂದ ಭಾರೀ ಸಿಡಿಲು, ಗುಡುಗು, ಗಾಳಿ ಸಮೇತ ಮಳೆಯಾಗುತ್ತಿದೆ. ತಾತ್ಕಾಲಿಕವಾಗಿ ನಮಗೆ ನೀಡಿದ್ದ ತಾಡುಪಾಲು ಹರಿದು ಹೋಗಿವೆ. ತಗಡು ಗಾಳಿ ಹೊಡೆತಕ್ಕೆ ಕಿತ್ತು ಹೋಗಿವೆ. ಆಕಸ್ಮಾತ್ ಹೀಗೆ ನಾವು ಇರುವಂತಹ ಪ್ರದೇಶದಲ್ಲಿ ಏನಾದರೂ ಅನಾಹುತ, ಅಪಾಯ, ಸಾವು ನೋವು ಸಂಭವಿಸಿದರೆ ಯಾರು ಹೊಣೆ? ಬಲವಂತವಾಗಿ ಹೆಗಡೆ ನಗರ ನಿವಾಸಿಗಳನ್ನು ಇಲ್ಲಿ ಸ್ಥಳಾಂತರಿಸಿದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಆಯುಕ್ತರು ಸೇರಿದಂತೆ ಅಧಿಕಾರಿಗಳು ಒಂದು ದಿನ ಬಂದು, ಹೆಗಡೆ ನಗರ ಸಂತ್ರಸ್ಥರು ಬಾಳಿದ ನಿರ್ಜನ ಪ್ರದೇಶದಲ್ಲಿ ಜೀವನ ಮಾಡಿ, ನೋಡಲಿ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಕಾರ್ಯದರ್ಶಿ ಜಬೀನಾ ಖಾನಂ ಹಾಗೂ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್ ರಾಮೇಗೌಡಆಕ್ರೋಶ ಹೊರ ಹಾಕಿದರು.ಮಕ್ಕಳು, ಹಸುಗೂಸುಗಳು, ಗರ್ಭಿಣಿ, ಬಾಣಂತಿಯರು, ವಿಕಲಚೇತನರು, ವಯೋವೃದ್ಧರು, ಅನಾರೋಗ್ಯ ಪೀಡಿತರು ಹೀಗೆ ಎಲ್ಲಾ ವಯೋಮಾನದವರನ್ನು ಅತಂತ್ರ ಮಾಡಿದ್ದೇ ಜಿಲ್ಲಾಡಳಿತ, ಪಾಲಿಕೆ ಸಾಧನೆಯಾಗಿದೆ. ನೀವು ಅಧಿಕಾರಿಗಳು ಒಂದು ದಿನ ಇಲ್ಲಿದ್ದು ಜೀವನ ಮಾಡಿ, ತೋರಿಸಿ ನೋಡೋಣ. ಒಂದೇ ಒಂದು ಗಂಟೆ ಸಹ ನಿಮ್ಮಿಂದ ಇಲ್ಲಿರಲು ಸಾಧ್ಯವೇ ಇಲ್ಲ. ನೀವೆಲ್ಲರೂ ಹವಾ ನಿಯಂತ್ರಿತ ವಾಹನ, ಕಚೇರಿ, ಮನೆಗಳಲ್ಲಿ ಜೀವನ ನಡೆಸುವವರು. ಬಡವರ ಕಷ್ಟ ನಿಮಗೆಲ್ಲಿಂದ ಅರ್ಥವಾಗಬೇಕು? ಪಾಲಿಕೆ ಇಇ ಹೆಗಡೆ ನಗರ ಸಂತ್ರಸ್ಥರ ಪ್ರದೇಶಕ್ಕೆಶುಕ್ರವಾರ ಭೇಟಿ ನೀಡಿ, ಕಾರಿನಿಂದ ಇಳಿಯುವಷ್ಟು ಸೌಜನ್ಯವನ್ನೂ ತೋರಿಸಲಿಲ್ಲ. ಇಂತಹವರು ಜನರ ಸಮಸ್ಯೆ ಆಳಿಸಲು ಸಾಧ್ಯವೇ ಅಂದು ಅವರು ಕಿಡಿಕಾರಿದರು.ಹೆಗಡೆ ನಗರ ಸಂತ್ರಸ್ಥರ ಪರಿಸ್ಥಿತಿ ಬಗ್ಗೆ 5 ತಿಂಗಳಲ್ಲಿ ಹೋಗಲಿ, ನಿನ್ನೆ, ಇವತ್ತಾದರೂ ಜಿಲ್ಲಾಧಿಕಾರಿಯಾಗಲೀ, ಪಾಲಿಕೆ ಆಯುಕ್ತರಾಗಲೀ ಸ್ಥಳಕ್ಕೆ ಸೌಜನ್ಯಕ್ಕೂ ಭೇಟಿ ನೀಡಿ, ಸಮಸ್ಯೆ ಆಲಿಸುವ ವ್ಯವದಾನ ತೋರಿಲ್ಲ. ನಿಮ್ಮ ಬಳಿ ಜನರು ಕೇಳುತ್ತಿರುವುದು ತಲೆಗೊಂದು ಸೂರು, ಒಂದಿಷ್ಟು ಮೂಲ ಸೌಕರ್ಯ. ನೀವ್ಯಾರು ನಿಮ್ಮ ಮನೆಯಿಂದಾಗಲೀ, ನಿಮ್ಮ ಸರ್ಕಾರಿ ಸಂಬಳದಲ್ಲಾಗಲೀ ಅವುಗಳನ್ನು ಒದಗಿಸುವುದಿಲ್ಲ. ನಿಮ್ಮಂತಹ ಬೇಜವಾಬ್ಧಾರಿ ಅಧಿಕಾರಿಗಳಿಂದಾಗಿ ಬಡವರು, ನಿರ್ಗತಿಕರಂತೂ ರೋಸಿ ಹೋಗಿದ್ದಾರೆ. ಇದೇ ಧೋರಣೆ ಮುಂದುವರಿದರೆ ತಮ್ಮ ಸಂಘಟನೆಯಿಂದ ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.ಸಂತ್ರಸ್ಥ ಕುಟುಂಬಸ್ಥರು ಇದ್ದರು. ಅತ್ತ ಸಂಜೆ ವರ್ತುಲ ರಸ್ತೆಯ ಹೆಗಡೆ ನಗರದ ಸ್ಥಳದಲ್ಲಿ ಮತ್ತೆ ವಾಪಾಸ್ಸಾದ ಜನರ ಬಳಿ ಧಾವಿಸಿದ್ದ ಪಾಲಿಕೆ ಅಧಿಕಾರಿಗಳನ್ನು ಸಂತ್ರಸ್ಥ ಕುಟುಂಬ ಸದಸ್ಯರು, ಸ್ಥಳೀಯ ನಿವಾಸಿಗಳು ಮುತ್ತಿಗೆ ಹಾಕಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
———————————-