ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅವ್ಯವಸ್ಥೆ, ಅನೈತಿಕ ಚಟುವಟಿಕೆ ಮತ್ತು ಕುಡುಕರ ತಾಣ ಹಳೆ ಕ್ವಾಟರ್ಸ್ ಕಟ್ಟಡ
ಸಂಜೆವಾಣಿ ನ್ಯೂಸ್
ನಂಜನಗೂಡು.ಮೇ.18:- ನಂಜನಗೂಡು ಸರ್ಕಾರಗಳು ಬಡ ಜನತೆಯ ಹಾಗೂ ಗ್ರಾಮೀಣ ಪ್ರದೇಶದ ನಗರ ಆರೋಗ್ಯ ದೃಷ್ಠಿಯಿಂದ ಕೋಟ್ಯಂತರ ರೂ., ಹಣ ವ್ಯಯಿಸುತ್ತದೆ. ಆದರೆ, ಅಧಿಕಾರಿ ವರ್ಗದ ನಿರ್ಲಕ್ಷ್ಯದಿಂದಾಗಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಆಸ್ಪತ್ರೆಯ ಹಳೇ ಕ್ವಾಟ್ರಸ್ ಕಟ್ಟಡ ಕುಡುಕರ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಈ ಹಿಂದೆ ತಾಲೂಕಿನ ಗರ್ಭಿಣಿಯರು ಹೆರಿಗೆ ಮೈಸೂರು ಜಿಲ್ಲಾಸ್ಪತ್ರೆಗೆ ಹೋಗಬೇಕಾಗಿತ್ತು. ಇದನ್ನರಿತ ದಿವಂಗತ ಮಾಜಿ ಸಂಸದರಾಗಿದ್ದ ಧ್ರುವನಾರಾಯಣ್ ಅವರು ಕೋಟ್ಯಂತರ ರೂ., ಅನುದಾನ ತಂದು ನಗರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿದರು. ಇದರಿಂದಾಗಿ ಈ ಭಾಗದ ಬಹಳಷ್ಟು ಮಂದಿ ಹೆಣ್ಣುಮಕ್ಕಳಿಗೆ ಅನುಕೂಲವಾಗಿತ್ತು.
ಆದರೆ, ಆಸ್ಪತ್ರೆಯ ಆವರಣದಲ್ಲಿ ಪ್ಲಾಸ್ಟಿಕ್ ಹಾಗೂ ರೋಗಿಗಳಿಗೆ ನೀಡುವ ಇಂಜೆಕ್ಷನ್, ಗ್ಲಾಸ್‍ಪೀಸ್, ಗ್ಲುಕೋಸ್ ಕವರ್‍ಗಳು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಆವರಣದ ಸಿಕ್ಕ ಸಿಕ್ಕ ಕಡೆಗಳಲ್ಲಿ ಬೀಸಾಡಿ ಬೆಂಕಿ ಹಾಕುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆ ವಾತಾವರಣ ಕಲುಷಿತಗೊಳ್ಳುವ ಜೊತೆಗೆ ಹಸು ಕಂದಮ್ಮಗಳು ಹಾಗೂ ಗರ್ಭಿಣಿಯರ ಮೇಲೆ ಬಹಳ ದುಷ್ಪರಿಣಾಮ ಬೀರುತ್ತಿವೆ. ಹೀಗಿದ್ದರೂ ಸಹಾ ಆಸ್ಪತ್ರೆ ಆಡಳಿತ ಮಂಡಳಿಯಾಗಲೀ, ಸಂಬಂಧಿಸಿದವರಾಗಲೀ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಬೇಜಬ್ದಾರಿ ತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗಬ್ಬದ್ದು ನಾರುತ್ತಿರುವ ಆಸ್ಪತ್ರೆ ಆವರಣ:
ಆಸ್ಪತ್ರೆ ಆವರಣದಲ್ಲಿ ಈ ರೀತಿ ಪ್ಲಾಸ್ಟಿಕ್ ವಸ್ತುಗಳನ್ನು ಸುಡುವುದು, ಬೆಂಕಿ ಹಾಕುವಂತಿಲ್ಲ. ಸದ್ಯ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅರ್ಧಂಬರ್ಧ ಸುಟ್ಟು ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ಪದಾರ್ಥಗಳಿಂದ ಆವರಣವೆಲ್ಲ ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಒಳರೋಗಿಗಳು ಹಾಗೂ ಇನ್ನಿತರರು ರೋಗ ರುಜಿನಿ ಹಾರಡುವುದೆಂಬ ಆತಂಕದಿಂದ ಕಾಲ ಕಳೆಯುವಂತಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರೀತಿಯ ಘಟನೆಗಳು ಆಸ್ಪತ್ರೆ ಆವರಣದಲ್ಲಿ ಮರುಕಳಿಸದಂತೆ ಕ್ರಮವಹಿಸಬೇಕು ಸಾರ್ವಜನಿಕರು ಆಗ್ರಹಿದ್ದಾರೆ.
ಅನೈತಿಕ ಚಟುವಟಿಕೆ, ಕುಡುಕರ ತಾಣ:
ನಗರದ ತಾಯಿ ಮಕ್ಕಳ ಆಸ್ಪತ್ರೆಯ ಹಳೇ ಕ್ವಾಟ್ರಸ್ ಶೀಥಿಲಗೊಂಡು ಬೀಳುವ ಹಂತದಲ್ಲಿದೆ. ಆದರೂ ಕೂಡ ಹಳೆಯ ಕಟ್ಟಡವನ್ನು ತೆರವುಗೊಳಿಸದೇ ಇರುವುದರಿಂದ ಕಿಡಿಕೇಡಿಗಳ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟಿದೆ. ಇನ್ನು, ರಾತ್ರಿ ಸಮಯದಲ್ಲಿ ಮಧ್ಯರಾತ್ರಿಯ ತನಕ ಕುಡುಕರು ಇಲ್ಲಿ ಮದ್ಯಪಾನ ಮಾಡುತ್ತಿರುತ್ತಾರೆ. ಕೂಡಲೇ ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಂಡು ಕಟ್ಟಡವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಒಂದೆಂಡೆ ಸ್ವಚ್ಛತೆಯಿಂದ ಇದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿ ಬೀದಿ ನಾಟಕ ಇನ್ನಿತರ ಕಾರ್ಯಕ್ರಮಗಳ ಮೂಲಕ ಜನತೆ ಅರಿವು ಮೂಡಿಸುವ ಆರೋಗ್ಯ ಇಲಾಖೆ, ಮತ್ತೊಂದೆಡೆ ಹಸು ಕಂದಮ್ಮಗಳಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗಬ್ಬೆದು ನಾರುತ್ತಿರುವುದು ನಿಜಕ್ಕೂ ನಾಚಿಕೆ ಗೇಡಿನ ಸಂಗತಿ. ಕಮಲಮ್ಮ, ಸಾರ್ವಜನಿಕರು.