ತೆರಿಗೆ ವಸೂಲಾತಿ ಆಂದೋಲನ
ವಿಜಯಪುರ, ಮೇ ೧೮: ಪಟ್ಟಣದಲ್ಲಿ ಪುರಸಭೆ ವತಿಯಿಂದ ಆಸ್ತಿ ತೆರಿಗೆ ವಸೂಲಾತಿ ಆಂದೋಲನ ಅಭಿಯಾನವನ್ನು ಏರ್ಪಡಿಸಲಾಗಿದ್ದು, ಪಟ್ಟಣದ ೨೩ ವಾರ್ಡ್ಗಳಲ್ಲಿ ಪ್ರತಿದಿನ ಒಂದೊಂದು ವಾರ್ಡ್ಗಳಲ್ಲಿ ಪುರಸಭೆಯ ಸಿಬ್ಬಂದಿ ವರ್ಗ ಆಸ್ತಿ ತೆರಿಗೆ ವಸೂಲಾತಿಗಾಗಿ ಅಭಿಯಾನವನ್ನು ರೂಪಿಸಿಕೊಂಡಿದ್ದು, ಅದರ ಮೇರೆಗೆ ಗುರುವಾರದಂದು ಜೆಸಿ ಬಡಾವಣೆಯಲ್ಲಿ ಆಸ್ತಿ ತೆರಿಗೆ ವಸೂಲಾತಿ ಆಂದೋಲನ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಅಧಿಕಾರಿ ಚಂದ್ರುರವರು ಮಾತನಾಡಿ, ಜುಲೈ ೨೦೨೪ರವರೆಗೂ ಕಂದಾಯ ಪಾವತಿಗೆ ಅವಕಾಶ ಇದ್ದು, ಜುಲೈ ನಂತರ ಪ್ರತಿ ತಿಂಗಳಿಗೆ ಶೇಕಡ ಎರಡರಷ್ಟು ದಂಡದೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು
ಕಂದಾಯ ನಿರೀಕ್ಷಕರಾದ ತ್ಯಾಗರಾಜರವರು ಮಾತನಾಡಿ, ೨೦೨೪-೨೫ ನೇ ಸಾಲಿನ ಹಾಗೂ ಹಿಂದಿನ ವರ್ಷಗಳ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಸದೆ ಇರುವ ಆಸ್ತಿ ಮಾಲೀಕರುಗಳಿಗೆ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಈ ತೆರಿಗೆ ವಸೂಲಾತಿ ಆಂದೋಲನವನ್ನು ಎಲ್ಲಾ ವಾರ್ಡ್ಗಳಲ್ಲಿಯೂ ನಿಗದಿಪಡಿಸಿದ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಅನುಕೂಲ ಪಡೆದುಕೊಂಡು ಆಸ್ತಿ ತೆರಿಗೆಯೊಂದಿಗೆ ನೀರಿನ ಶುಲ್ಕ, ವಾಣಿಜ್ಯ ಮಾಳಿಗೆಗಳ ಬಾಡಿಗೆ,ಉದ್ದಿಮೆ ಪರವಾನಗಿ ಶುಲ್ಕ, ಜಾಹೀರಾತು ಶುಲ್ಕ ಹಾಗೂ ಯುಜಿಡಿ ಶುಲ್ಕಗಳನ್ನು ಸ್ಥಳದಲ್ಲಿಯೇ ಪಾವತಿಸಿ ರಸೀದಿ ಪಡೆಯಬಹುದೆಂದು ತಿಳಿಸಿದರು.
ಶುಲ್ಕ ಪಾವತಿಗಾಗಿ ಆನ್ಲೈನ್ ಗಳಾದ ಫೋನ್ ಪೇ, ಗೂಗಲ್ ಪೇ ಮತ್ತಿತರ ಯುಪಿಐ ಆಪ್ ಗಳ ಮೂಲಕ ತೆರಿಗೆ ಪಾವತಿಸಿ ರಸೀದಿ ನೀಡಲಾಗುವುದೆಂದು ತಿಳಿಸಿರುವರು .
ಮೇ ೧೭ರ ಶುಕ್ರವಾರದಂದು ಭರತ್ ನಗರದ ಅಂಗನವಾಡಿ ಕೇಂದ್ರದ ಬಳಿ, ಮೇ ೧೮ರ ಶನಿವಾರದಂದು ರಹಮತ್ ನಗರದ ಮಸೀದಿ ಬಳಿ, ಮೇ ೨೦ರ ಸೋಮವಾರದಂದು ಶಿಡ್ಲಘಟ್ಟ ಡಿವಿಷನ್ ರಸ್ತೆಯ ಬಳಿ, ಮೇ ೨೧ರ ಮಂಗಳವಾರದಂದು ಸುಣ್ಣಕಲ್ಲು ಬೀದಿಯ ಎಲ್ಲಮ್ಮ ತಾಯಿ ದೇವಸ್ಥಾನದ ಬಳಿ, ಮೇ ೨೨ರ ಬುಧವಾರದಂದು ಕೇಶವ ಸ್ವಾಮಿ ದೇವಾಲಯ ರಸ್ತೆಯ ಬ್ರಾಹ್ಮಣ ಕಲ್ಯಾಣ ಮಂಟಪದ ಬಳಿ, ಇದೇ ರೀತಿ ಮಹಬೂಬ್ ನಗರದ ನೂರಾನಿ ಮಸೀದಿ ಬಳಿ, ಕೋಟೆ ಬೀದಿಯ ಆನೇಕಲ್ ಛತ್ರದ ಬಳಿ, ಇಂದಿರಾನಗರ ಅಂಗನವಾಡಿ ಕೇಂದ್ರದ ಬಳಿ, ಮಂಡಿ ಬೆಲೆ ರಸ್ತೆಯ ಅಂಗನವಾಡಿ ಕೇಂದ್ರ, ಮಾರ್ಕೆಟ್ ರಸ್ತೆ ರಾಜೀವ್ ನಗರ, ಪ್ರಶಾಂತನಗರ, ಸೂಲಾಲದಿನ್ನೆ, ಬಲಿಜಬೀದಿ, ದುರ್ಗಾ ತಾಯಿ ಕಾಲೋನಿ, ಶಾಂತಿನಗರ ದರ್ಗಾ ಮೊಹಲ್ಲ, ರೆಡ್ಡಿ ಬೀದಿಗಳಲ್ಲಿ ಕಂದಾಯ ವಸೂಲಾತಿ ಆಂದೋಲನದ ಪ್ರಯುಕ್ತ ನಿಗದಿತ ದಿನಗಳಂದು ಪುರಸಭೆ ಸಿಬ್ಬಂದಿ ಸ್ಥಳದಲ್ಲಿಯೇ ಕಂದಾಯ ವಸೂಲಾತಿ ಮಾಡಿ ರಶೀದಿಗಳನ್ನು ನೀಡಲಿರುವರೆಂದು, ಸೌಲಭ್ಯವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕೆಂದು ತಿಳಿಸಿರುವರು
ಈ ಸಂದರ್ಭದಲ್ಲಿ ಪುರಸಭೆಯ ತೆರಿಗೆ ವಸೂಲಿದಾರರುಗಳಾದ ಪ್ರಥಮ ದರ್ಜೆ ಗುಮಾಸ್ತರಾದ ಅನಿಲ್, ಜೋಶಿ, ಸಹಾಯಕರುಗಳಾದ ಜನಾರ್ದನ್, ಮಂಜು ನಾಥ್, ಮಮತಾ, ಪೂರ್ಣಿಮಾ, ಆಶಾ ರವರುಗಳಿದ್ದು, ಸಂಜೆ ವೇಳೆಗೆ ೨೫ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿಯೇ ಕಂದಾಯ ಪಾವತಿ ಮಾಡಿದ್ದರು.