ಮೇ 22ರಿಂದ ಭೈರಾಮಡಗಿ ದಾವಲಮಲೀಕ ಜಾತ್ರೆ
ಕಲಬುರಗಿ:ಮೇ.17: ಹಿಂದೂ ಮುಸಲ್ಮಾನ ಭಾವೈಕ್ಯತಾ ಸಂಕೇತದ ಅಫಜಲಪೂರ ತಾಲೂಕಿನ ಭೈರಾಮಡಗಿ ಗ್ರಾಮದ ದಾವಲಮಲೀಕ ಜಾತ್ರಾ ಮಹೋತ್ಸವ ಇದೇ ಮೇ 23 ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.
ಹಿಂದೂಗಳು ಮಲ್ಲಿಸಾಬನೆಂದು ಹಾಗೂ ಮುಸಲ್ಮಾನರು ದಾವಲಮಲೀಕರೆಂದು ಕರೆಯುವ ಈ ದಾವಲಮಲೀಕ ಜಾತ್ರೆಯು ಈ ಭಾಗದಲ್ಲಿಯೇ ಪ್ರಖ್ಯಾತಿ ಪಡೆದಿದ್ದು, ಜಾತ್ರಾ ಮಹೋತ್ಸವದಲ್ಲಿ ರಾಜ್ಯವಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಂದಲೂ ಭಕ್ತರು ಭಾಗವಹಿಸುತ್ತಾರೆ.
ಮೇ 22ರಂದು ಬುಧವಾರ ರಾತ್ರಿ 8ಗಂಟೆಯಿಂದ ಗುರುವಿನ ಗಂಧ ಕಳಸವು ಮಕ್ಕಳ ಚಿಣಿಕೋಲ ಆಟದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ರಾತ್ರಿ ಮಂದಿರಕ್ಕೆ ಬಂದು ತಲುಪುವುದು. ಮೇ. 23 ರಂದು ಮಹಾ ದೀಪೋತ್ಸವ ನಡೆಯಲಿದ್ದು, ಅಂದು ಬೆಳಿಗ್ಗೆಯಿಂದ ಸಂಜೆವರೆಗೆ ಸದ್ಭಕ್ತರಿಂದ ಹರಕೆಯ ಕಾರ್ಯಕ್ರಮಗಳು ನಡೆಯಲಿವೆ. 24ರಂದು ಶುಕ್ರವರ ದೀಪ ಹಾಗೂ ಮಕ್ಕಳಿಂದ ಕುಸ್ತಿ ಪಂದ್ಯಗಳು ನಡೆಯಲಿವೆ. ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಮೇಳಗಳಿಂದ ಗೀ ಗೀ ಪದಗಳು ಜರುಗಲಿವೆ. ಭಾವೈಕ್ಯತಾ ಸಂಕೇತದ ದಾವಲಮಲೀಕ ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಕ್ತ ಮಂಡಳಿ ಕೋರಿದೆ.