ರಾಷ್ಟ್ರದ ಅಭಿವೃದ್ಧಿಗೆ ದೂರಸಂಪರ್ಕ ಕ್ಷೇತ್ರದ ಕೊಡುಗೆ ಅಪಾರ
ಕಲಬುರಗಿ:ಮೇ.17: ನಮ್ಮ ದೇಶ ಸೇರಿದಂತೆ ಇಡೀ ವಿಶ್ವದಲ್ಲಿ ಉಂಟಾದ ದೂರ ಸಂಪರ್ಕ ಕ್ಷೇತ್ರದಲ್ಲಿನ ಕ್ರಾಂತಿಯಿಂದಾಗಿ, ಪ್ರಸ್ತುತವಾಗಿ ಜಗತ್ತೇ ಒಂದು ಚಿಕ್ಕ ಗ್ರಾಮವೆಂಬ ಪರಿಕಲ್ಪನೆ ಮೂಡಲು ಸಾಧ್ಯವಾಗಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಸಾಧ್ಯವಾಗಿದ್ದು, ದೂರಸಂಪರ್ಕ ಕ್ಷೇತ್ರದ ಕ್ರಾಂತಿಯಿಂದಾಗಿ ರಾಷ್ಟ್ರ ತೀವ್ರಗತಿಯಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗಿದ್ದು, ಅಪಾರವಾದ ಕೊಡುಗೆಯನ್ನು ನೀಡಿದೆ ಎಂದ್ರುರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಜೆ.ಆರ್. ನಗರದಲ್ಲಿರುವ ‘ಶ್ರೇಯಸ್ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಲಾಗಿದ್ದ ‘ಅಂತಾರಾಷ್ಟ್ರೀಯ ದೂರಸಂಪರ್ಕ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎಲ್ಲರಿಗೂ ಅನಕೂಲವಾಗಲಿ ಎಂಬ ಉದ್ದೇಶದಿಂದ ದೂರಸಂಪರ್ಕ ಕೇತ್ರದಲ್ಲಿ ದಿನನಿತ್ಯಲೂ, ನಿರಂತರವಾಗಿ ಹೊಸ ಸಂಶೋಧನೆಗಳು ಜರುಗುತ್ತಿವೆ. ಅದರಲ್ಲಿ ಯುವಕರು ಮೋಬೈಲ್ ಹಾಗೂ ಇಂಟರನೆಟ್ ಬಳಕೆಯನ್ನು ದುರುಪಯೋಗ ಮಾಡಿಕೊಳ್ಳದೆ, ಅವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು.
ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಪ್ರಾಚೀನ ಕಾಲದಲ್ಲಿ ಸಂಪರ್ಕ ಸಾಧಿಸುವದು ತುಂಬಾ ಕಷ್ಟದಾಯಕವಾಗಿತ್ತು. ಅನೇಕ ಕ್ರಾಂತಿಕಾರಕ ಸಂಶೋಧನೆಗಳ ಮೂಲಕ ಸಾಕಷ್ಟು ಸಾಧನೆಗಳನ್ನು ಮಾಡಲಾಗಿದೆ. ದೂರಸಂಪರ್ಕ ಮಾಧ್ಯಮಗಳಾದ ಆಕಾಶವಾಣಿ, ದೂರದರ್ಶನ, ಕಂಪ್ಯೂಟರ್, ಇಂಟರನೆಟ್, ಮೋಬೈಲ್, ಪತ್ರಿಕೆಗಳಿಂದ ಅನೇಕ ಮಹತ್ವಪೂರ್ಣವಾದ ಮಾಹಿತಿ, ವಿಷಯಗಳು ದೊರೆಯುತ್ತಿದ್ದು, ಇವೆಲ್ಲವುಗಳ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕರಾದ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಪೂಜಾ ಜಮಾದಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.